ಈ 20 ಸಾಹಸಿ ಮಕ್ಕಳಿಗೆ ಗಣರಾಜ್ಯೋತ್ಸವ ಪರೇಡ್ ಯೋಗ ಇಲ್ಲ !
ಹೊಸದಿಲ್ಲಿ, ಜ. 19: ಭಾರತದ ಮಕ್ಕಳ ಕಲ್ಯಾಣ ಮಂಡಳಿ (ಐಸಿಸಿಡಬ್ಲ್ಯು) ಎಂಬ ಸ್ವಯಂಸೇವಾ ಸಂಸ್ಥೆ ಮಕ್ಕಳಿಗೆ ನೀಡುತ್ತಿದ್ದ ಸಾಹಸ ಪ್ರಶಸ್ತಿಯಿಂದ ಕೇಂದ್ರ ಸರ್ಕಾರ ಕಳಚಿಕೊಳ್ಳುವುದರೊಂದಿಗೆ ಹೊಸ ವಿವಾದ ಸೃಷ್ಟಿಯಾಗಿದೆ. ಇದರಿಂದಾಗಿ ದೇಶದ ವಿವಿಧೆಡೆಗಳಿಂದ ಆಗಮಿಸಿರುವ 20 ಮಂದಿ ಸಾಹಸಿ ಮಕ್ಕಳಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶ ಕೈತಪ್ಪಿದೆ.
ಈ ಸ್ವಯಂಸೇವಾ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ತನಿಖೆ ನಡೆಸುತ್ತಿದ್ದು, ಈ ಕಾರಣದಿಂದ ಕೇಂದ್ರ ಸರ್ಕಾರ ಈ ಸ್ವಯಂಸೇವಾ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಶಸ್ತಿ ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.
1957ರಿಂದ ನೀಡಲಾಗುತ್ತಿದ್ದ ಈ ಪ್ರಶಸ್ತಿಯನ್ನು ಕೈಬಿಟ್ಟು, ಕೇಂದ್ರ ಸರ್ಕಾರ ಸ್ವತಃ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಿದೆ. ಈಗಾಗಲೇ ಪ್ರಶಸ್ತಿಗೆ 26 ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಎನ್ಜಿಒ ಆಯ್ಕೆ ಮಾಡಿದ ಮಕ್ಕಳು ಗಣರಾಜ್ಯೋತ್ಸವ ಪರೇಡ್ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಮಕ್ಕಳ ಮುಖದಲ್ಲಿ ಬೇಸರದ ಛಾಯೆ ಮಡುಗಟ್ಟಿತ್ತು. ಇವರಿಗೆ ಪ್ರಶಸ್ತಿಯನ್ನು ಹೇಗೆ ನೀಡಬಹುದು ಎಂಬ ಬಗ್ಗೆ ಇನ್ನೂ ಸಂಸ್ಥೆಗೆ ಸ್ಪಷ್ಟತೆ ಇಲ್ಲ. ಇದು ನಮ್ಮ ಸಂಸ್ಥೆಯೇ ನೀಡುವ ಪ್ರಶಸ್ತಿಯಾಗಿದ್ದು, ಇದು ಮುಂದುವರಿಯಲಿದೆ ಎಂದು ಐಸಿಸಿಡಬ್ಲ್ಯು ಅಧ್ಯಕ್ಷೆ ಗೀತಾ ಸಿದ್ಧಾರ್ಥ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ ಹಾಗೂ ರಕ್ಷಣಾ ಸಚಿವಾಲಯಕ್ಕೆ ಬರೆದ ಪತ್ರಕ್ಕೆ ಯಾವುದೇ ಸ್ಪಂದನೆ ಇಲ್ಲ ಎಂದು ಅವರು ಹೇಳಿದ್ದಾರೆ.
ನಾವು ಬಹಳ ಪ್ರಯತ್ನ ಹಾಕಿ ಈ ಸಾಹಸಿ ಮಕ್ಕಳನ್ನು ಗುರುತಿಸಿದ್ದೇವೆ. ಆದರೆ ಇದೀಗ ಸಚಿವಾಲಯ ತಾವು ಸನ್ಮಾನಿಸಲಿರುವ ಮಕ್ಕಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದೆ. ಇದು ತೀರಾ ಬೇಸರದ ಸಂಗತಿ. ಈ ಬಗ್ಗೆ ಸ್ಪಷ್ಟನೆ ದೊರೆತ ನಂತರ ಮಕ್ಕಳು ಹಾಗೂ ಅವ ಪೋಷಕರಿಗೆ ಸೂಕ್ತ ಮಾಹಿತಿ ನೀಡುತ್ತೇವೆ ಎಂದು ವಿವರಿಸಿದರು.