ಪಾಕ್ ಸಿಜೆಐ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ನ್ಯಾಯಪೀಠದಲ್ಲಿ ಕುಳಿತುಕೊಂಡ ಜಸ್ಟಿಸ್ ಲೋಕೂರ್
ಹೊಸದಿಲ್ಲಿ, ಜ. 19: ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ನಿವೃತ್ತ ನ್ಯಾಯಾಧೀಶರೊಬ್ಬರು ಪಾಕಿಸ್ತಾನ ಸುಪ್ರೀಂ ಕೋರ್ಟಿನ ನ್ಯಾಯಪೀಠದಲ್ಲಿ ಕುಳಿತುಕೊಂಡು ಸುಮಾರು 45 ನಿಮಿಷಗಳ ಕಾಲ ಮೂರು ಪ್ರಕರಣಗಳ ವಿಚಾರಣೆ ಸಂದರ್ಭ ಹಾಜರಿದ್ದರು. ಅವರೇ ಜಸ್ಟಿಸ್ ಮದನ್ ಲೋಕೂರ್.
ಈ ವಿಶೇಷ ವಿದ್ಯಮಾನ ಪಾಕಿಸ್ತಾನದ ಸುಪ್ರೀಂ ಕೋರ್ಟಿನ ನೂತನ 26ನೇ ಮುಖ್ಯ ನ್ಯಾಯಮೂರ್ತಿಯಾಗಿ ಆಸಿಫ್ ಸಯೀದ್ ಖಾನ್ ಖೋಸಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭ ನಡೆದಿತ್ತು.
ಮುಖ್ಯ ನ್ಯಾಯಮೂರ್ತಿ ಖೋಸಾ ಹಾಗೂ ನ್ಯಾಯಮೂರ್ತಿ ಮನ್ಸೂರ್ ಆಲಿ ಶಾ ಅವರಿದ್ದ ದ್ವಿಸದಸ್ಯ ಪೀಠದ ಜತೆ ಜಸ್ಟಿಸ್ ಲೋಕೂರ್, ಟರ್ಕಿಶ್ ರಿಪಬ್ಲಿಕ್ ಆಫ್ ನಾರ್ತ್ ಸೈಪ್ರಸ್ ಇಲ್ಲಿನ ಸುಪ್ರೀಂ ಕೋರ್ಟ್ ಮುಖ್ಯಸ್ಥ ನರಿನ್ ಫೆರ್ಡಿ ಸೆಫಿಕ್, ನೈಜೀರಿಯಾದ ಬೋರ್ನೋ ರಾಜ್ಯದ ಮುಖ್ಯ ನ್ಯಾಯಾಧೀಶ ಕಾಶಿಂ ಝನ್ನಾ ಹಾಗೂ ಕಾಮನ್ವೆಲ್ತ್ ಜುಡಿಶಿಯಲ್ ಎಜುಕೇಶನ್ ಇನ್ಸ್ಟಿಟ್ಯೂಟ್, ಕೆನಡಾ ಇದರ ಸ್ಥಾಪಕಾಧ್ಯಕ್ಷ ಹಾಗೂ ಮಾಜಿ ನ್ಯಾಯಾಧೀಶ ಸಾಂಡ್ರಾ ಇ ಒಕ್ಸನರ್ ಅವರೂ ಕುಳಿತಿದ್ದರು.
ತಮ್ಮ ಪತ್ನಿ ಸವಿತಾ ಲೋಕೂರ್ ಜತೆ ಪಾಕಿಸ್ತಾನಕ್ಕೆ ಆಗಮಿಸಿದ್ದ ಜಸ್ಟಿಸ್ ಲೋಕೂರ್ ಅಲ್ಲಿ ತಮಗೆ ದೊರೆತ ಸ್ವಾಗತ ಅಭೂತಪೂರ್ವ ಎಂದು ಬಣ್ಣಿಸಿದ್ದಾರಲ್ಲದೆ ಬಂದ ಎಲ್ಲಾ ಆಹ್ವಾನಿತ ನ್ಯಾಯಾಧೀಶರಿಗೆ ನ್ಯಾಯಪೀಠದಲ್ಲಿ ಕುಳಿತುಕೊಳ್ಳುವ ಅವಕಾಶ ನೀಡಿದ್ದನ್ನೂ ಶ್ಲಾಘಿಸಿದ್ದಾರೆ.
ಅಲ್ಲಿನ ನ್ಯಾಯಾಲಯದಲ್ಲಿ ಜನಜಂಗುಳಿಯಿರಲಿಲ್ಲ ಹಾಗೂ ಭಾರತದಲ್ಲಿದ್ದಂತೆ ಮಾಧ್ಯಮಕ್ಕೆ ಮುಕ್ತವಾಗಿತ್ತು ಎಂದು ಅವರು ಹೇಳಿದ್ದಾರೆ. ಜಸ್ಟಿಸ್ ಲೋಕೂರ್ ಅವರು ಮುಖ್ಯ ನ್ಯಾಯಮೂರ್ತಿ ಖೋಸಾ ಜತೆ 2004ರಿಂದ ಆತ್ಮೀಯ ಸಂಬಂಧ ಹೊಂದಿದ್ದಾರೆ. ಆಗ ಜಸ್ಟಿಸ್ ಖೋಸಾ ಅವರು ಲಾಹೋರ್ ಹೈಕೋರ್ಟಿನಲ್ಲಿದ್ದರೆ ಜಸ್ಟಿಸ್ ಲೋಕೂರ್ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಜಸ್ಟಿಸ್ ಖೋಸಾ ಅವರೊಬ್ಬ ಅತ್ಯುತ್ತಮ ವ್ಯಕ್ತಿ ಮತ್ತು ನ್ಯಾಯಾಧೀಶ ಎಂದು ಜಸ್ಟಿಸ್ ಲೋಕೂರ್ ಬಣ್ಣಿಸಿದ್ದಾರೆ.
ಐದು ವರ್ಷಗಳ ಹಿಂದೆ ಆಗಿನ ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ತಸ್ಸದುಖ್ ಹುಸೈನ್ ಜಿಲ್ಲಾನಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಜಸ್ಟಿಸ್ ಲೋಕೂರ್ ಭಾಗವಹಿಸಿದ್ದರು.