ಶಬರಿಮಲೆ ಪ್ರವೇಶಿಸಲು ಮತ್ತಿಬ್ಬರು ಮಹಿಳೆಯರ ಯತ್ನ
ಪತ್ತನಂತಿಟ್ಟ, ಜ. 19: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಯಾತ್ರಾರ್ಥಿ ಯಾಗಿ ಆಗಮಿಸಿ ನೀಲಕ್ಕಲ್ ಮೂಲ ಶಿಬಿರ ತಲುಪಿದ ಋತುಚಕ್ರ ವಯಸ್ಸಿನ ಇಬ್ಬರು ಮಹಿಳೆಯರಿಗೆ ಪಂಬಾದಲ್ಲಿ ಭಕ್ತರು ಪ್ರತಿಭಟನೆ ನಡೆಸುತ್ತಿರುವುದಾಗಿ ಎಚ್ಚರಿಸಿ ಪೊಲೀಸರು ಹಿಂದೆ ಕಳುಹಿಸಿದ್ದಾರೆ.
ಇಬ್ಬರು ಮಹಿಳೆಯರಾದ ರೇಷ್ಮಾ ಹಾಗೂ ಶಾಲಿಯಾ ಈ ತಿಂಗಳ ಆರಂಭದಲ್ಲಿ ಕೂಡ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಲು ಪ್ರಯತ್ನಿಸಿದ್ದರು. ಆದರೆ, ದೇವಾಲಯ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈ ಮಹಿಳೆಯರು 6 ಮಂದಿ ಪುರುಷರೊಂದಿಗೆ ದೇವಾಲಯ ಸಂದರ್ಶಿಸಲು ಆಗಮಿಸಿದ್ದರು. ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಋತುಚಕ್ರ ವಯಸ್ಸಿನ ಮಹಿಳೆಯರಿಗೆ ಕೂಡ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ ಬಳಿಕ ಶಬರಿಮಲೆ ದೇವಾಲಯದ ಸುತ್ತಮುತ್ತ ಪ್ರದೇಶಗಳು ಪ್ರತಿಭಟನೆಗೆ ಸಾಕ್ಷಿಯಾಗಿದ್ದವು.
ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ 10ರಿಂದ 50 ವರ್ಷಗಳ ನಡುವಿನ 51 ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಿದ್ದಾರೆ ಎಂದು ಶುಕ್ರವಾರ ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಶಬರಿಮಲೆ ದೇವಾಲಯದಲ್ಲಿ ದರ್ಶನಕ್ಕೆ 16 ಲಕ್ಷಕ್ಕೂ ಅಧಿಕ ಭಕ್ತರು ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 8.5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 10ರಿಂದ 50 ವರ್ಷಗಳ ಒಳಗಿನ ಒಟ್ಟು 7564 ಮಹಿಳೆಯರು ದರ್ಶನಕ್ಕೆ ಹೆಸರು ನೋಂದಾಯಿಸಿದ್ದಾರೆ. ಡಿಜಿಟಲ್ ಸ್ಕಾನ್ ಮಾಡಿದ ದಾಖಲೆ ಪ್ರಕಾರ ಈಗಾಗಲೇ 51 ಮಂದಿ ಋತುಚಕ್ರ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಿ ಯಾವುದೇ ಸಮಸ್ಯೆ ಇಲ್ಲದೆ ದರ್ಶನ ಪಡೆದಿದ್ದಾರೆ ಎಂದು ಕೇರಳ ಪೊಲೀಸ್ ವರಿಷ್ಠರ ಹೇಳಿಕೆ ತಿಳಿಸಿದೆ.