ಪ್ರಧಾನಿ ಮೋದಿಯನ್ನಲ್ಲ, ಆ ಮಾನಸಿಕತೆಯನ್ನು ತೊಲಗಿಸುವ ಪ್ರಯತ್ನವಿದು: ಯಶವಂತ ಸಿನ್ಹಾ
ಕೊಲ್ಕತಾ,ಜ.19: ವಿಪಕ್ಷಗಳು ಮಹಾಮೈತ್ರಿಯನ್ನು ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮಾತ್ರವಲ್ಲ ಅವರೊಂದಿಗೆ ಆ ರೀತಿಯ ಮಾನಸಿಕತೆಯನ್ನೂ ತೆಗೆದುಹಾಕಲು ರಚಿಸಿದೆ ಎಂದು ಮಾಜಿ ಬಿಜೆಪಿ ನಾಯಕ ಯಶವಂತ ಸಿನ್ಹಾ ಶನಿವಾರ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿ ಶನಿವಾರ ನಡೆದ ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಸಿನ್ಹಾ, ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಇಲ್ಲಿ ಸರಕಾರವನ್ನು ಟೀಕಿಸುವವರನ್ನು ದೇಶದ್ರೋಹಿಗಳೆಂದು ತಿಳಿಯಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಸದ್ಯದ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಾವಿಲ್ಲಿ ಸೇರಿರುವುದು ಪ್ರಧಾನಿ ಮೋದಿಯನ್ನು ತೊಲಗಿಸಲು ಎಂದು ಬಿಜೆಪಿ ಹೇಳುತ್ತಿದೆ. ಆದರೆ ಇದು ಮೋದಿ ಬಗ್ಗೆ ಮಾತ್ರ ಅಲ್ಲ, ಇದು ಮಾನಸಿಕತೆಗೆ ಸಂಬಂಧಿಸಿದ್ದು, ನಾವು ಆ ಮಾನಸಿಕತೆಯನ್ನು ವಿರೋಧಿಸುತ್ತಿದ್ದೇವೆ ಎಂದು ಸಿನ್ಹಾ ತಿಳಿಸಿದ್ದಾರೆ.
ಮೋದಿ ಸರಕಾರದ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಘೋಷ ವಾಕ್ಯದ ಬಗ್ಗೆ ವ್ಯಂಗ್ಯವಾಡಿದ ಸಿನ್ಹಾ, ಅದು ನಿಜವಾಗಿ ಸಬ್ಕಾ ಸಾಥ್ ಸಬ್ಕಾ ವಿನಾಶ್ ಆಗಬೇಕಿತ್ತು ಎಂದಿದ್ದಾರೆ.