ವರ್ಗಾವಣೆ ಮಾಡದಂತೆ ಸಿಎಂ ಪಿಣರಾಯಿ ಮೊರೆ ಹೋದ ಕ್ರೈಸ್ತ ಸನ್ಯಾಸಿನಿಯರು
ತಿರುವನಂತಪುರ, ಜ. 19: ಕಾನ್ವೆಂಟ್‌ನಲ್ಲೇ ಇರಲು ಅವಕಾಶ ನೀಡುವಂತೆ, ವರ್ಗಾವಣೆ ಮಾಡದಂತೆ ಹಾಗೂ ಈ ವಿಷಯದ ಮಧ್ಯೆ ಪ್ರವೇಶಿಸುವಂತೆ ಕುರವಿಲಂಗಾಂಡ್‌ನಲ್ಲಿರುವ ಮಿಷನರಿಸ್ ಆಫ್ ಜೀಸಸ್ ಕಾನ್ವೆಂಟ್‌ನಿಂದ ವರ್ಗಾವಣೆಗೊಂಡಿರುವ ಕೈಸ್ತ ಸನ್ಯಾಸಿನಿಯರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ.
ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊ ಮುಳಕ್ಕಲ್ ಭಾರಿ ಪ್ರಭಾವಿ ವ್ಯಕ್ತಿಯಾಗಿದ್ದು, ಪ್ರಕರಣವನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ಕೂಡ ಕ್ರೈಸ್ತ ಸನ್ಯಾಸಿನಿಯರು ಹೇಳಿದ್ದಾರೆ. ಬಿಷಪ್ ಫ್ರಾಂಕೊ ಮುಳಕ್ಕಲ್ ಅವರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಕುರುವಿಲಂಗಾಡ್ ನಲ್ಲಿರುವ ಮಿಷನರಿ ಆಫ್ ಜೀಸಸ್ ಕಾನ್ವೆಂಟ್‌ನ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ಕೇರಳದ ಕೆಥೋಲಿಕ್ ಚರ್ಚ್ ಈ ವಾರ ವರ್ಗಾಯಿಸಿತ್ತು. ಇದು ನಮ್ಮನ್ನು ಭಾವನಾತ್ಮಕವಾಗಿ ಬೇರ್ಪಡಿಸುವ ಹಾಗೂ ಅಸ್ತಿರಗೊಳಿಸುವ ಪ್ರಯತ್ನ. ಇಲ್ಲಿ ನಮಗೆ ಭದ್ರತೆ ನೀಡದವರು ಬಿಹಾರ್ ಅಥವಾ ಪಂಜಾಬ್‌ನಂತಹ ಇತರ ಸ್ಥಳಗಳಲ್ಲಿ ನಮಗೆ ಭದ್ರತೆ ನೀಡುತ್ತಾರೆ ಎಂಬ ಬಗ್ಗೆ ಯಾವುದೇ ಖಾತರಿ ಇಲ್ಲ ಎಂದು ವರ್ಗಾವಣೆಯಾಗಿರುವ ಕ್ರೈಸ್ತ ಸನ್ಯಾಸಿನಿಯರಲ್ಲಿ ಓರ್ವರಾದ ಸಿಸ್ಟರ್ ಅನುಪಮಾ ಹೇಳಿದ್ದಾರೆ.