ಪೌರತ್ವ ತಿದ್ದುಪಡಿ ಮಸೂದೆ: ಲಾಭ ಯಾರಿಗೆ?
ಹೊಸದಿಲ್ಲಿ, ಜ.21: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಉದ್ದೇಶದ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ, ಈಗಾಗಲೇ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ 31 ಸಾವಿರ ವಲಸೆಗಾರರಿಗೆ ತಕ್ಷಣದ ಲಾಭ ಸಿಗಲಿದೆ.
ಆದರೆ ಅಸ್ಸಾಂನಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸವಾಗಿರುವ ಬಾಂಗ್ಲಾದೇಶಿ ವಲಸಿಗರಿಗೆ ಪೌರತ್ವ ದೃಢಪಡಿಸಲಾಗುತ್ತದೆ ಎಂಬ ಭಾವನೆ ಸುಳ್ಳಾಗಿದ್ದು, ಕೇವಲ 187 ಮಂದಿ ಬಾಂಗ್ಲಾದೇಶಿ ವಲಸಿಗರಿಗೆ ಮಾತ್ರ 2011ರಿಂದ 2019ರ ಜನವರಿ 8ರವರೆಗೆ ವಾಸಕ್ಕೆ ದೀರ್ಘಾವಧಿ ವೀಸಾ ಮಂಜೂರು ಮಾಡಲಾಗಿದೆ ಎನ್ನುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ.
ಕೇಂದ್ರದ ಮಸೂದೆಯ ಅತಿದೊಡ್ಡ ಫಲಾನುಭವಿಗಳೆಂದರೆ ಪಾಕಿಸ್ತಾನಿ ವಲಸಿಗರು. ಇಲ್ಲಿನ 34,817 ವಲಸಿಗರಿಗೆ ದೀರ್ಘಾವಧಿ ವೀಸಾ ನೀಡಲಾಗಿದೆ. ಆದರೆ ಪಾಕಿಸ್ತಾನಿ ವಲಸಿಗರ ಪೈಕಿ ದೀರ್ಘಾವಧಿ ವೀಸಾ ಪಡೆದವರ ಧರ್ಮವಾರು ಮಾಹಿತಿ ಲಭ್ಯವಿಲ್ಲ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜಂಟಿ ಸಂಸದೀಯ ಸಮಿತಿಯ ವರದಿ ಪ್ರಕಾರ, ಒಟ್ಟು 31,313 ಮಂದಿ ವಲಸಿಗರ ಪೈಕಿ 25,447 ಮಂದಿ ಹಿಂದೂಗಳು, 5,807 ಮಂದಿ ಸಿಕ್ಖರು, 55 ಮಂದಿ ಕ್ರಿಶ್ಚಿಯನ್ನರು, ಇಬ್ಬರು ಬೌದ್ಧರು ಹಾಗೂ ಇಬ್ಬರು ಪಾರ್ಸಿಗಳು ಈ ಸೌಲಭ್ಯ ಪಡೆದಿದ್ದಾರೆ. ಪಾಕಿಸ್ತಾನದಿಂದ ವಲಸೆ ಬಂದು ದೀರ್ಘಾವಧಿ ವೀಸಾ ಪಡೆದಿರುವ 15,107 ಮಂದಿ ರಾಜಸ್ಥಾನದಲ್ಲಿ ವಾಸವಿದ್ದರೆ, 1,560 ಮಂದಿ ಗುಜರಾತ್, 1,444 ಮಂದಿ ಮಧ್ಯಪ್ರದೇಶ, 599 ಮಂದಿ ಮಹಾರಾಷ್ಟ್ರ, 581 ಮಂದಿ ದಿಲ್ಲಿ, 342 ಮಂದಿ ಛತ್ತೀಸ್ಗಢ ಹಾಗೂ 101 ಮಂದಿ ಉತ್ತರ ಪ್ರದೇಶದಲ್ಲಿ ವಾಸವಿದ್ದಾರೆ.