ನ್ಯೂಝಿಲ್ಯಾಂಡ್‌ನತ್ತ ನೂರು ಭಾರತೀಯ ವಲಸಿಗರನ್ನು ಹೊತ್ತ ಬೋಟ್: ಪೊಲೀಸ್
ಹೊಸದಿಲ್ಲಿ,ಜ.21: ನೂರಕ್ಕೂ ಅಧಿಕ ಭಾರತೀಯ ವಲಸಿಗರನ್ನು ಹೊತ್ತಿರುವ ಮೀನುಗಾರಿಕ ಬೋಟೊಂದು ನ್ಯೂಝಿಲೆಂಡ್‌ನತ್ತ ಸಾಗುತ್ತಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ದಿಲ್ಲಿ ಮತ್ತು ತಮಿಳುನಾಡಿನ ಜನರನ್ನು ಹೊತ್ತ ಬೋಟ್ ಜನವರಿ 12ರಂದು ಕೇರಳದ ಮುನಂಭಮ್ ಬಂದರನ್ನು ತೊರೆದಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆ ರಾಯ್ಟರ್ಸ್‌ಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಪ್ರಭು ದಂಡಪಾಣಿ ಎಂಬ ವ್ಯಕ್ತಿ ಈ ಮಾಹಿತಿಯನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿ ಬೋಟ್‌ನಲ್ಲಿ ನೂರರಿಂದ ಇನ್ನೂರು ಜನರಿರುವ ಸಾಧ್ಯತೆಯಿದೆ. ವಲಸಿಗರು ಬಿಟ್ಟು ಹೋದ 70ಕ್ಕೂ ಅಧಿಕ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಜೊತೆಗೆ 20 ಗುರುತಿನ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀಲದಲ್ಲಿ ಒಣ ವಸ್ತುಗಳು ಮತ್ತು ಬಟ್ಟೆಗಳು ದೊರೆತ್ತಿದ್ದು ಇದರಿಂದ ವಲಸಿಗರು ದೀರ್ಘ ಪ್ರಯಾಣಕ್ಕೆ ಸಿದ್ಧತೆ ನಡೆಸಿದ್ದರು ಎಂಬುದು ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.