ಸಿದ್ದಗಂಗೆಯಲ್ಲಿ ಭಕ್ತ ‘ಗಂಗೆ’

ತುಮಕೂರು, ಜ.22: ಸಿದ್ದಗಂಗಾ ಮಠದಲ್ಲಿ ಸೋಮವಾರ ನಿಧನರಾದ ಸಿದ್ದಗಂಗಾ ಡಾ.ಶಿವಕುಮಾರ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದುಬರುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಅಂತಿಮ ದರ್ಶನಕ್ಕೆ 2 ಕಿ.ಮೀ ತನಕ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.
ಲಕ್ಷಾಂತರ ಮಂದಿಯ ಆಗಮನದಿಂದಾಗಿ ದರ್ಶನ ವಿಳಂಬವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯ ಮಂತ್ರಿ ಎಚ್ .ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ , ಕೇಂದ್ರ, ರಾಜ್ಯ ಸಚಿವರು, ಸಂಸದರು, ಶಾಸಕರು ಶ್ರೀಗಳ ದರ್ಶನ ಪಡೆದಿದ್ದಾರೆ
ಈ ವೇಳೆ ಯಾವುದೇ ನೂಕು ನುಗ್ಗಲು ಉಂಟಾಗದಂತೆ ಪೊಲೀಸರು ಬಿಗಿ ಬಂದೋ ಬಸ್ತ್ ಮಾಡಿದ್ದಾರೆ.
10 ಲಕ್ಷ ಕ್ಕೂ ಅಧಿಕ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಶ್ರೀಗಳ ಕ್ರಿಯಾ ಸಮಾಧಿಗೆ ವಿಧಿವಿಧಾನಗಳು ಆರಂಭಗೊಂಡಿದ್ದು, ಕಂಚುಗಲ್ ಬಂಡೆ ಮಠದ ಬಸವ ಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸ್ಥಳ ಶುದ್ದಿ ಕಾರ್ಯ ನಡೆದಿದೆ.
ಕ್ರಿಯಾ ಸಮಾಧಿಗೆ 10,000 ವಿಭೂತಿ ಗಟ್ಟಿ, 50 ಕೆ.ಜಿ. ಮರಳು , 900 ಕೆ.ಜಿ ಉಪ್ಪು, 1 ಮೂಟೆ ಬಿಲ್ವಪತ್ರೆ ಬಳಸಲಾಗುವುದು .
ಮಧ್ಯಾಹ್ನ 3 ಗಂಟೆಗೆ ಲಿಂಗ ಶರೀರದ ಮೆರವಣಿಗೆ ಆರಂಭವಾಗಲಿದೆ. 4:30ಕ್ಕೆ ಕ್ರಿಯಾ ಸಮಾಧಿ ಬಳಿ ಮೆರವಣಿಗೆ ಅಂತ್ಯಗೊಳ್ಳಲಿದೆ. 20 ಶ್ರೀಗಳ ನೇತೃತ್ವದಲ್ಲಿ ಸಮಾಧಿ ಕ್ರಿಯಾ ವಿಧಿವಿಧಾನಗಳು ನೆರವೇರಲಿದೆ.