ಕೆನರಾ ಬ್ಯಾಂಕ್ ನಿವೃತ್ತರ ಒಕ್ಕೂಟ ಕೇಂದ್ರೀಯ ಕಾರ್ಯಕಾರಿ ಸಮಿತಿ ಸಭೆ
ಮಂಗಳೂರು, ಜ.22: ಅಖಿಲ ಭಾರತ ಕೆನರಾ ಬ್ಯಾಂಕ್ ನಿವೃತ್ತರ ಒಕ್ಕೂಟ ಕೇಂದ್ರೀಯ ಕಾರ್ಯಕಾರಿ ಸಮಿತಿ ಸಭೆ ಜ.23 ಮತ್ತು 24ರಂದು ನಗರದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯ ಬಳಿಯ ಕಾರ್ಪೋರೇಶನ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಗೋಲ್ಡನ್ ಜ್ಯಬಿಲಿ ಹಾಲ್‌ನಲ್ಲಿ ನಡೆಯಲಿದೆ.
ಜ.23ರಂದು ಸಂಜೆ 4.30ಕ್ಕೆ ಸಂಘದ ಪದಾಧಿಕಾರಿಗಳ ಜತೆ ಸಂವಾದ, ಸಭೆ ಆಯೋಜಿಸಲಾಗಿದೆ. ಪಿಂಚಣಿ ಹೆಚ್ಚಳ, ವೈದ್ಯಕೀಯ ವಿಮೆ, ಕುಟುಂಬ ಪಿಂಚಣಿ ಹೆಚ್ಚಳ ಮುಂತಾದ ಸಮಸ್ಯೆಗಳ ಪ್ರಸ್ತುತ ಸ್ಥಿತಿ ಬಗ್ಗೆ ಕೇಂದ್ರೀಯ ಪದಾಕಾರಿಗಳು ಮಾಹಿತಿ ನೀಡುವರು. ಬೇಡಿಕೆಗಳ ಈಡೇರಿಕೆಗೆ ಸಂಘಟನೆ ನಡೆಸಿದ ಚಳವಳಿ ಬಗ್ಗೆ ಕೂಲಕಂಷವಾಗಿ ತಿಳಿಸಲಿದ್ದಾರೆ ಎಂದು ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಸ್.ವಿ. ಶ್ರೀನಿವಾಸನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
20 ವರ್ಷ ಕಳೆದರೂ ಮೂಲ ಪಿಂಚಣಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಇದರಿಂದ ನಿವೃತ್ತ ಬ್ಯಾಂಕ್ ನೌಕರರು ಆಶ್ವಾಸನೆ ನೆಚ್ಚಿಕೊಂಡು ಬಲಿಪಶುಗಳಾಗಿದ್ದಾರೆ. ಸರಕಾರ ತಕ್ಷಣ ಕುಟುಂಬ ಪಿಂಚಣಿ ಹೆಚ್ಚಿಸಬೇಕು, ಪಿಂಚಣಿ ಅಪ್‌ಡೇಶನ್ ಮಾಡಬೇಕು, ಶೇ.100 ತುಟ್ಟಿಭತ್ತೆ ನೀಡಬೇಕು, ವೈದ್ಯಕೀಯ ವಿಮೆಯಲ್ಲಿ ಸಬ್ಸಿಡಿ ನೀಡಬೇಕು, ಕೇಂದ್ರೀಯ ಮಟ್ಟದ ನಿವೃತ್ತ ನೌಕರರ ಮಾತುಕತೆಗಳಲ್ಲಿ ನಮ್ಮ ಒಕ್ಕೂಟವನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿರಿಯ ನಾಗರಿಕರಾದ ನಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.
ಒಕ್ಕೂಟ ಚೇರ್‌ಮೆನ್ ಎ.ಕೆ. ಬನ್ಸಾಲ್, ಅಧ್ಯಕ್ಷ ವಿಕೆಎಂ ವರ್ಮಾ, ಜತೆ ಕಾರ್ಯದರ್ಶಿ ಕೆ.ಆರ್. ಮನೋಹರನ್, ಕಾರ್ಯದಶಿರ್ ಬಿ. ವೆಂಕಟರಾವ್ ಉಪಸ್ಥಿತರಿದ್ದರು.







