ಚಿಪ್ ಆಧರಿತ ಇ-ಪಾಸ್‌ಪೋರ್ಟ್‌ಗಳ ವಿತರಣೆಗೆ ಕ್ರಮ: ಪ್ರಧಾನಿ ನರೇಂದ್ರ ಮೋದಿ

ವಾರಣಾಸಿ,ಜ.22: ಭಾರತೀಯ ಪ್ರಜೆಗಳಿಗೆ ಕೇಂದ್ರೀಕೃತ ಪಾಸ್‌ಪೋರ್ಟ್ ವ್ಯವಸ್ಥೆಯಡಿ ಚಿಪ್ ಆಧರಿತ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ಪ್ರವಾಸಿ ಭಾರತೀಯ ದಿವಸ್ 2019ನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಕೇಂದ್ರೀಕೃತ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ರೂಪಿಸಲು ವಿಶ್ವಾದ್ಯಂತ ನಮ್ಮ ರಾಯಭಾರಿ ಕಚೇರಿಗಳು ಮತ್ತು ದೂತಾವಾಸಗಳನ್ನು ಪಾಸ್‌ಪೋರ್ಟ್ ಸೇವಾ ಯೋಜನೆಯೊಂದಿಗೆ ಜೋಡಣೆಗೊಳಿಸಲಾಗುತ್ತಿದೆ ಎಂದರು.
ಭಾರತೀಯ ಮೂಲದ ವ್ಯಕ್ತಿಗಳು(ಪಿಐಒ) ಮತ್ತು ಸಾಗರೋತ್ತರ ಭಾರತೀಯ ಪ್ರಜೆ(ಒಸಿಐ) ಕಾರ್ಡ್‌ಗಳಿಗೆ ವೀಸಾ ನೀಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು,ಭಾರತೀಯರು ವಿದೇಶಗಳಲ್ಲಿ ಸುಖದಿಂದಿರುವಂತೆ ಮತ್ತು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುವುದು ಸರಕಾರದ ಪ್ರಯತ್ನವಾಗಿದೆ ಎಂದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿದೇಶಗಳಲ್ಲಿ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಎರಡು ಲಕ್ಷಕ್ಕೂ ಅಧಿಕ ಭಾರತೀಯರಿಗೆ ಸರಕಾರವು ನೆರವಾಗಿದೆ ಎಂದೂ ಮೋದಿ ತಿಳಿಸಿದರು.







