35 ಎ ವಿಧಿಯನ್ನು ಪ್ರಶ್ನಿಸಿರುವ ಅರ್ಜಿಗಳ ಕುರಿತು ‘ಇನ್-ಚೇಂಬರ್’ ನಿರ್ಧಾರ ಕೈಗೊಳ್ಳಲಿರುವ ಸುಪ್ರೀಂ

ಹೊಸದಿಲ್ಲಿ,ಜ.22: ಜಮ್ಮು-ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ಒದಗಿಸಿರುವ 35 ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣಾ ಕಲಾಪಗಳ ಪಟ್ಟಿಯಲ್ಲಿ ಸೇರಿಸುವ ಕುರಿತಂತೆ ತಾನು ‘ಇನ್-ಚೇಂಬರ್(ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಪ್ರವೇಶವಿಲ್ಲದ ಖಾಸಗಿ ವಿಚಾರಣೆ) ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿಳಿಸಿತು.
ಮು.ನ್ಯಾ.ರಂಜನ ಗೊಗೊಯಿ ಅವರ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಉಲ್ಲೇಖಿಸಿದ ವಕೀಲ ಬಿಮಲ್ ರಾಯ್ ಅವರು,ಎನ್‌ಜಿಒ ‘ವಿ ದಿ ಸಿಟಿಜನ್ಸ್’ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದರು. ವಿಷಯವನ್ನು ಜನವರಿ ಎರಡನೇ ವಾರದಲ್ಲಿ ಕಲಾಪಗಳ ಪಟ್ಟಿಗೆ ಸೇರಿಸುವಂತೆ ನ್ಯಾಯಾಲಯವು ಈ ಹಿಂದೆ ಆದೇಶಿಸಿತ್ತು ಎನ್ನುವುದನ್ನು ಅವರು ನೆನಪಿಸಿದರು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿವೇದಿಸಿಕೊಂಡಿದ್ದ ಹಿನ್ನೆಲೆಯಲ್ಲಿ 35 ಎ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಗೊಂಚಲಿನ ವಿಚಾರಣೆಯನ್ನು ಈ ವರ್ಷದ ಜನವರಿಗೆ ಮುಂದೂಡಿತ್ತು.
1954ರಲ್ಲಿ ರಾಷ್ಟ್ರಪತಿಗಳ ಆದೇಶದ ಮೂಲಕ ಸಂವಿಧಾನಕ್ಕೆ ಸೇರ್ಪಡೆಗೊಳಿಸಲಾದ 35 ಎ ವಿಧಿಯು ಜಮ್ಮು-ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಅಧಿಕಾರಗಳನ್ನು ನೀಡಿದೆ ಮತ್ತು ರಾಜ್ಯದ ಹೊರಗಿನವರು ರಾಜ್ಯದಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸುವುದನ್ನು ನಿಷೇಧಿಸಿದೆ. ಜಮ್ಮು-ಕಾಶ್ಮೀರದ ಮಹಿಳೆ ರಾಜ್ಯದ ಹೊರಗಿನ ವ್ಯಕ್ತಿಯನ್ನು ವಿವಾಹವಾದರೆ ಆಕೆಗೆ ಆಸ್ತಿಹಕ್ಕುಗಳನ್ನೂ ಈ ವಿಧಿಯು ನಿರಾಕರಿಸುತ್ತದೆ. ಇದು ಆಕೆಯ ಉತ್ತರಾಧಿಕಾರಿಗಳಿಗೂ ಅನ್ವಯಿಸುತ್ತದೆ.
ಹಿಂದಿನ ವಿಚಾರಣೆ ಸಂದರ್ಭ ವಕೀಲರೋರ್ವರು,ರಾಜ್ಯದ ಮಹಿಳೆಯೋರ್ವಳು ಹೊರಗಿನ ವ್ಯಕ್ತಿಯನ್ನು ವಿವಾಹವಾದರೆ ಆಸ್ತಿಹಕ್ಕುಗಳು ಸೇರಿದಂತೆ ಹಲವಾರು ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ. ಆದರೆ ರಾಜ್ಯದ ಪುರುಷನೋರ್ವ ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾದರೆ,ಆತ ಮತ್ತು ಆತನ ಪತ್ನಿ ಎಲ್ಲ ಹಕ್ಕುಗಳನ್ನೂ ಪಡೆಯುತ್ತಾರೆ ಎಂದು ಬೆಟ್ಟು ಮಾಡಿದ್ದರು.
35ಎ ವಿಧಿ ಮತ್ತು ಅದರ ಕೆಲವು ಆಯಾಮಗಳ ಕುರಿತು ಚರ್ಚೆಯ ಅಗತ್ಯವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,35 ವಿಧಿಯಲ್ಲಿ ಲಿಂಗ ತಾರತಮ್ಯದ ಅಂಶವಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದ್ದರು.
ನ್ಯಾಷನಲ್ ಕಾನ್ಫರೆನ್ಸ್ ಮತು ಸಿಪಿಎಂ ಸೇರಿದಂತೆ ರಾಜಕೀಯ ಪಕ್ಷಗಳು 35ಎ ವಿಧಿಯನ್ನು ಬೆಂಬಲಿಸಿ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿವೆ.
35 ವಿಧಿಯನ್ನು ರದ್ದುಗೊಳಿಸುವಂತೆ ಕೋರಿ ಎನ್‌ಜಿಒ ‘ಇಕ್ಝುತ್ ಜಮ್ಮು’ ಸಹ ಅರ್ಜಿಯನ್ನು ಸಲ್ಲಿಸಿದ್ದು,ಈ ವಿಧಿಯು ಜಾತ್ಯತೀತತೆ ಸಿದ್ಧಾಂತಕ್ಕೆ ವಿರುದ್ಧವಾಗಿರುವ ದ್ವಿರಾಷ್ಟ್ರ ಸಿದ್ಧಾಂತವನ್ನು ಉತ್ತೇಜಿಸುತ್ತಿದೆ ಎಂದು ಹೇಳಿದೆ.
ರಾಜ್ಯ ಸರಕಾರವು ಈ ವಿಧಿಯನ್ನು ಸಮರ್ಥಿಸಿಕೊಂಡಿದೆ.







