ಮ್ಯಾನ್ಮಾರ್‌ಗೆ ಕಳಿಸಬೇಡಿ, ಅವರು ನಮ್ಮನ್ನು ಕೊಲ್ಲುತ್ತಾರೆ
ತ್ರಿಪುರದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ರೊಹಿಂಗ್ಯಾಗಳ ಅಳಲು
ಅಗರ್ತಲ, ಜ.22: ಮನೆ, ಮಠ ಎಲ್ಲವನ್ನೂ ಕಳೆದುಕೊಂಡು, ಮೂರು ದೇಶಗಳ (ಭಾರತ, ಬಾಂಗ್ಲಾ ಮತ್ತು ಮ್ಯಾನ್ಮಾರ್) ಪೊಲೀಸ್ ಚೆಕ್‌ಪೋಸ್ಟ್ ಹಾಗೂ ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಾ ಅಲೆಮಾರಿಗಳಂತೆ ಜೀವನ ಸಾಗಿಸುತ್ತಿರುವ ಸುಮಾರು 2 ಸಾವಿರ ರೊಹಿಂಗ್ಯಾಗಳು ಇದೀಗ ತ್ರಿಪುರದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ತಮ್ಮ ಅತಂತ್ರ ಬದುಕಿನ ಬಗ್ಗೆ ವಿವರಿಸುವ ಅಬ್ದುಲ್ ಶುಕೂರ್, ಮುಹಮ್ಮದ್ ಶಹಜಹಾನ್ ಹಾಗೂ ಇತರ ರೊಹಿಂಗ್ಯಾ ಜನತೆ, “ದಯವಿಟ್ಟು ನಮ್ಮನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಬೇಡಿ. ಅಲ್ಲಿಗೆ ಹೋದರೆ ಅವರು ನಮ್ಮನ್ನು ಕೊಲ್ಲದೆ ಇರುವುದಿಲ್ಲ” ಎಂದು ಕಣ್ಣೀರು ಹಾಕುತ್ತಾರೆ. ಮ್ಯಾನ್ಮಾರ್‌ನ ರಖೈನ್ ರಾಜ್ಯದ ನಿವಾಸಿಗಳಾಗಿದ್ದ ತಾವು ಸುಮಾರು 6 ವರ್ಷದ ಹಿಂದೆ ಅಲ್ಲಿ ತಮ್ಮ ವಿರುದ್ಧ ನಡೆದ ಹಿಂಸಾಚಾರದಿಂದ ಕಂಗೆಟ್ಟು ಪಶ್ಚಿಮ ಬಂಗಾಳ ವಲಯದಲ್ಲಿ ಭಾರತದ ಗಡಿ ದಾಟಿ ಒಳನುಸುಳಿ ಜಮ್ಮುವಿಗೆ ತೆರಳಿ ಅಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿ , ಮೊಬೈಲ್ ಫೋನ್ ಟವರ್ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ಸರಕಾರ ಮತ್ತು ಸ್ಥಳೀಯ ಜನತೆ ತಮಗೆ ಉಗ್ರರ ಹಣೆಪಟ್ಟಿ ಹಚ್ಚಿ ತಮ್ಮನ್ನು ಅಲ್ಲಿಂದ ಓಡಿಸಲು ಮುಂದಾಗಿದೆ. ಅಲ್ಲಿನ ಅಸಹಿಷ್ಣುತೆ ಮತ್ತು ಜನರ ಬೆದರಿಕೆಗೆ ಅಂಜಿ ಅಲ್ಲಿಂದ ಸುಮಾರು 1,500 ಮಂದಿ ತ್ರಿಪುರಾಕ್ಕೆ ಓಡಿ ಬಂದಿದ್ದೇವೆ ಎಂದವರು ವಿವರಿಸುತ್ತಾರೆ.
ತ್ರಿಪುರಾಕ್ಕೆ ರೈಲಿನ ಮೂಲಕ ಬಂದ ಇವರು ಬಾಂಗ್ಲಾದೇಶದ ಗಡಿದಾಟಿ ಒಳನುಸುಳಲು ನಡೆಸಿದ ಪ್ರಯತ್ನವನ್ನು ಬಾಂಗ್ಲಾದೇಶದ ಗಡಿಭದ್ರತಾ ಪಡೆ ತಡೆದು ಇವರನ್ನು ಥಳಿಸಿದೆ. ಭಾರತದಲ್ಲಿ ತಮ್ಮನ್ನು ವಿರೋಧಿಸುತ್ತಿದ್ದಾರೆ ಮತ್ತು ಮ್ಯಾನ್ಮಾರ್‌ಗೆ ಹೋದರೆ ಕೊಂದು ಬಿಡುತ್ತಾರೆ. ತಮಗೆ ಈಗ ಬಾಂಗ್ಲಾದೇಶ ಮಾತ್ರ ಸುರಕ್ಷಿತ ಸ್ಥಳವಾಗಿದೆ ಎಂದು ರೊಹಿಂಗ್ಯಾಗಳು ಹೇಳುತ್ತಿದ್ದಾರೆ.
ತಮ್ಮ ಬಳಿಯಿದ್ದ ಯುಎನ್‌ಎಚ್‌ಸಿಆರ್ (ಯುನೈಟೆಡ್ ನೇಷನ್ಸ್ ಹೈಕಮಿಷನರ್ ಫಾರ್ ರೆಫ್ಯುಜೀಸ್) ರೆಫ್ಯುಜಿ ಕಾರ್ಡ್ ಹಾಗೂ ಇತರ ವಸ್ತುಗಳನ್ನು ಭಾರತೀಯ ಗಡಿ ಭದ್ರತಾ ಪಡೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಕಾರ್ಡ್‌ನ ಸಹಾಯದಿಂದ ನಮಗೆ ಕೆಲಸ ದೊರಕುತ್ತಿತ್ತು. ಈಗ ಜೀವ ಉಳಿಸಿಕೊಳ್ಳಲು ತಲೆತಪ್ಪಿಸಿಕೊಂಡು ಓಡಾಡಬೇಕಿದೆ. “ನನ್ನ ಎರಡು ಮಕ್ಕಳಿಗೆ ಇತರ ಮಕ್ಕಳಂತೆ ಬಾಲ್ಯವನ್ನು ಆನಂದಿಸಲೂ ಆಗುತ್ತಿಲ್ಲ” ಎಂದು ಅಬ್ದುಲ್ ಶುಕೂರ್ ಅಳಲು ತೋಡಿಕೊಂಡಿದ್ದಾರೆ. ಜನವರಿ 18ರಂದು ಬಾಂಗ್ಲಾದೇಶದೊಳಗೆ ನುಸುಳಲು ಯತ್ನಿಸಿದಾಗ ಶುಕೂರ್ ಮತ್ತು ಅವರ ಜೊತೆಗಿದ್ದ 30 ಮಂದಿಯನ್ನು ಬಾಂಗ್ಲಾ ಗಡಿ ಭದ್ರತಾ ಪಡೆಯವರು ತಡೆದಿದ್ದಾರೆ. ಬಳಿಕ ತ್ರಿಪುರದ ರೈಮುರ ಗಡಿ ತಪಾಸಣಾ ಕೇಂದ್ರದ ಬಳಿ, ಭಾರತ-ಬಾಂಗ್ಲಾ ಗಡಿರೇಖೆಯ ನಡುವಿರುವ ಹೊಲದ ಮಧ್ಯೆ ನಾಲ್ಕು ದಿನ ಮತ್ತು ನಾಲ್ಕು ರಾತ್ರಿ ಮರಗಟ್ಟುವ ಚಳಿಯಲ್ಲಿ ನಡುಗುತ್ತಾ, ಜೀವ ಕೈಯಲ್ಲಿ ಹಿಡಿದುಕೊಂಡು ಅತಂತ್ರರಾಗಿ ದಿನ ಕಳೆಯುತ್ತಿದ್ದಾರೆ.