ಭಾರತದ ಬೆಳವಣಿಗೆಯ ವೇಗ ಸಾಲದು: ಐಎಂಎಫ್ ಮುಖ್ಯಸ್ಥೆ ಲಗಾರ್ಡ್
ದಾವೋಸ್,ಜ.22: ಭಾರತವು ಈಗಿನ ಪ್ರಗತಿ ದರಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳವಣಿಗೆಯನ್ನು ಹೊಂದಬೇಕಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡ್ ಅವರು ಹೇಳಿದ್ದಾರೆ. ಇಲ್ಲಿ ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು,ಭಾರತದ ಜನಸಂಖ್ಯೆಯನ್ನು ಪರಿಗಣಿಸಿದರೆ ಅದು ಈಗಿನ ದರಕ್ಕಿಂತ ಇನ್ನೂ ಹೆಚ್ಚಿನ ಪ್ರಗತಿ ದರವನ್ನು ಸಾಧಿಸಬೇಕಿದೆ. ಸರಕಾರವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ ಎಂದರು.
2019 ಮತ್ತು 2010ರಲ್ಲಿ ಭಾರತದ ಪ್ರಗತಿ ದರವು ಅನುಕ್ರಮವಾಗಿ ಶೇ.7.5 ಮತ್ತು ಶೇ.7.7 ಆಗಲಿದೆ ಎಂದು ಅಂದಾಜಿಸಿರುವ ಐಎಂಎಫ್,2020ರವೇಳೆಗೆ ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ ಎಂದು ತಿಳಿಸಿದೆ. 2018ರಲ್ಲಿ ಭಾರತದ ಪ್ರಗತಿ ದರವು ಶೇ.7.3ರಷ್ಟಿದೆ ಎಂದು ಅದು ಹೇಳಿದೆ.
ಅಂದಾಜು ಪ್ರಗತಿ ದರವು ಹೆಚ್ಚಿರುವುದು ಒಳ್ಳೆಯ ಸಂಕೇತವಾಗಿದೆ ಎಂದ ಲಗಾರ್ಡ್, ಆದರೆ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿರುವುದರಿಂದ ಸರಕಾರವು ಕೃಷಿಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ಬಗೆಹರಿಸುವ ಅಗತ್ಯವಿದೆ ಎಂದು ಹೇಳಿದರು.