ಅಮಿತ್ ಶಾ ಹೆಲಿಕಾಪ್ಟರ್ ಇಳಿಯಲು ಮತ್ತೆ ಅನುಮತಿ ನಿರಾಕರಿಸಿದ ಮಮತಾ ಸರಕಾರ
ಕೊಲ್ಕತ್ತಾ, ಜ.23: ಪಶ್ಚಿಮ ಬಂಗಾಳದ ಝರ್ ಗ್ರಾಮ್ ಎಂಬಲ್ಲಿ ಬಿಜೆಪಿ ರ್ಯಾಲಿ ನಡೆಯುವ ಸ್ಥಳದ ಪಕ್ಕದಲ್ಲಿ ತಮ್ಮ ಹೆಲಿಕಾಪ್ಟರ್ ಇಳಿಸಲು ರಾಜ್ಯ ಸರಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ. ನಿಗದಿಯಂತೆ ಇಂದು ಬೆಳಗ್ಗೆ ಶಾ ಅಲ್ಲಿಗೆ ತಲುಪಬೇಕಿತ್ತು.
ಅವರ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ನಾಯಕರಾದ ಕೈಲಾಶ್ ವಿಜಯವರ್ಘಿಯಾ ಹಾಗೂ ರೂಪಾ ಗಂಗುಲಿ ಈ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇತ್ತೀಚಿಗಿನ ದಿನಗಳಲ್ಲಿ ಅಮಿತ್ ಶಾ ಹೆಲಿಕಾಪ್ಟರಿಗೆ ರಾಜ್ಯದಲ್ಲಿ ಇಳಿಯಲು ಅನುಮತಿ ನಿರಾಕರಿಸಿರುವುದು ಇದು ಎರಡನೇ ಬಾರಿಯಾಗಿದೆ. ಶಾ ಹೆಲಿಕಾಪ್ಟರಿಗೆ ಅನುಮತಿ ನೀಡುವಂತೆ ಕಳೆದ ರಾತ್ರಿಯಿಡೀ ಬಿಜೆಪಿ ಕಾರ್ಯಕರ್ತರು ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಈ ಹಿಂದೆ ಮಮತಾ ಮಾಲ್ಡಾ ಜಿಲ್ಲೆಯಲ್ಲಿ ಶಾ ಹೆಲಿಕಾಪ್ಟರಿಗೆ ಅನುಮತಿ ನಿರಾಕರಿಸಿದ್ದರು. ಆ ಸಂದರ್ಭ ಅಲ್ಲಿ ವಿವಿಐಪಿ ಹೆಲಿಕಾಪ್ಟರಿಗೆ ಅನುಮತಿಸಲು ಸಾಧ್ಯವಿಲ್ಲವೆಂದು ಜಿಲ್ಲಾಡಳಿತ ಹೇಳಿತ್ತು. ‘‘ಆ ಸ್ಥಳದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕ ಹೆಲಿಪ್ಯಾಡ್ ಅನ್ನು ಸರಿಯಾಗಿ ನಿರ್ವಹಣೆ ಮಾಡಲಾಗಿಲ್ಲ. ಆ ಸ್ಥಳ ಹೆಲಿಕಾಪ್ಟರ್ ಇಳಿಯಲು ಸುರಕಿತವಲ್ಲ ಇದೇ ಕಾರಣಕ್ಕೆ ಅಮಿತ್ ಶಾ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡಲು ಸಾಧ್ಯವಿಲ್ಲ’’ ಎಂದು ಜಿಲ್ಲಾಡಳಿತ ಹೇಳಿತ್ತು.
ಕೊನೆಗೂ ಅಲ್ಲಿ ಮಂಗಳವಾರ ಸಂಜೆ ಶಾ ರ್ಯಾಲಿ ನಡೆಸಿದ್ದರಲ್ಲದೆ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು. ಈ ಸಂದರ್ಭ ಬಿಜೆಪಿಯ ಪ್ರಚಾರಾಭಿಯಾನ 'ಗಣತಂತ್ರ ಬಚಾವೋ' ಯಾತ್ರೆಗೂ ಅವರು ಚಾಲನೆ ನೀಡಿದ್ದರು.
ಬಿಜೆಪಿ ರಥ ಯಾತ್ರೆ ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡಬಹುದೆಂದು ರಾಜ್ಯ ಸರಕಾರ ದೂರಿಕೊಂಡ ನಂತರ ಹಲವು ವಾರಗಳ ಹಿಂದೆ ಪಕ್ಷಕ್ಕೆ ರಾಜ್ಯದಲ್ಲಿ ರಥಯಾತ್ರೆ ಆಯೋಜಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರೂ ನಂತರ ರ್ಯಾಲಿಗಳನ್ನು ಆಯೋಜಿಸಲು ಅನುಮತಿಸಿತ್ತು.