ನವಜಾತ ಶಿಶು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಸಂಶಯಾಸ್ಪದ ಸಾವು
ಪ್ರಜ್ಞಾಹೀನ ಸ್ಥಿತಿಯಲ್ಲಿ ಓರ್ವ ಪತ್ತೆ

ಭೋಪಾಲ್, ಜ.23: ಒಬ್ಬಳು ಮಹಿಳೆ ಮತ್ತಾಕೆಯ ನವಜಾತ ಶಿಶು ಸೇರಿದಂತೆ ಒಂದೇ ಕುಟುಂಬದ ನಾಲ್ಕು ಮಂದಿ ಸಂಶಯಾಸ್ಪದವಾಗಿ ತಮ್ಮ ಮನೆಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ಭೋಪಾಲದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೀಡಾದವರಲ್ಲಿ ಆತನ ಪತ್ನಿ, ಮಗು, ತಾಯಿ ಮತ್ತು 12 ವರ್ಷದ ಸೋದರ ಕೂಡ ಸೇರಿದ್ದಾರೆ.
ಅವರೆಲ್ಲರೂ ಹೇಗೆ ಮೃತಪಟ್ಟರೆಂದು ಇನ್ನೂ ದೃಢಪಟ್ಟಿಲ್ಲ. ಅವರು ಮನೆಯಲ್ಲಿ ಅಂಗೀಥಿ ಅಥವಾ ಮನೆಯನ್ನು ಬೆಚ್ಚಗಾಗಿಸಲು ಸಾಂಪ್ರದಾಯಿಕ ರೂಂ ಹೀಟರ್ ಉಪಯೋಗಿಸುತ್ತಿದ್ದರೆನ್ನಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಮಂದಿದೀಪ್ (22) ಎಂಬಾತ ಭೋಪಾಲ ಸಮೀಪದ ಫ್ಯಾಕ್ಟರಿಯೊಂದರ ಉದ್ಯೋಗಿಯಾಗಿದ್ದಾನೆ. ಅವರ ಮನೆಗೆ ಒಳಗಿನಿಂದ ಚಿಲಕ ಹಾಕಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಅವರೆಲ್ಲರ ಬಾಯಿಯಲ್ಲಿ ನೊರೆಯಿತ್ತು ಹಾಗೂ ಮಹಿಳೆಯ ಕೈಗಳಲ್ಲಿ ಗಾಯಗಳ ಗುರುತಿತ್ತು ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಅವರೆಲ್ಲರೂ ಉಸಿರುಗಟ್ಟಿ ಸತ್ತಿರಬೇಕೆಂದು ಶಂಕಿಸಲಾಗಿದ್ದು, ವಿಷಪ್ರಾಶನ ಅಥವಾ ಕೊಲೆಯ ಸಾಧ್ಯತೆಯನ್ನೂ ತಳ್ಳಿ ಹಾಕಲಾಗಿಲ್ಲ. ಸಾವಿನ ಕಾರಣದ ಬಗ್ಗೆ ಪೋಸ್ಟ್ ಮಾರ್ಟಂ ಸ್ಪಷ್ಟ ಉತ್ತರ ನೀಡಬಹುದೆಂದು ನಿರೀಕ್ಷಿಸಲಾಗಿದೆ.
ಕುಟುಂಬ ಸದಸ್ಯರನ್ನು ಸೋಮವಾರ ಸಂಜೆ ತಾವು ನೋಡಿದ್ದಾಗಿ ನೆರೆಹೊರೆಯವರು ತಿಳಿಸಿದ್ದಾರೆ. ಮಂಗಳವಾರ ದಿನವಿಡೀ ಮನೆಯ ಬಾಗಿಲು ಹಾಕಿದ್ದನ್ನು ಕಂಡು ನೆರೆಯವರು ಬಾಗಿಲು ಬಡಿದಿದ್ದು ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ನಂತರ ಮನೆಯ ಬಾಗಿಲೊಡೆದು ಒಳ ಪ್ರವೇಶಿಸಿದ್ದರು.