ಸೋಲುವ ಭೀತಿಯಿಂದ ಸರಕಾರ ಅಸ್ಥಿರಗೊಳಿಸುವ ಯತ್ನ: ಐವನ್ ಡಿಸೋಜ ಆರೋಪ

ಮಂಗಳೂರು, ಜ.23: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿರುವುದರಿಂದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 190ರಿಂದ 240 ಸ್ಥಾನಗಳನ್ನು ಗಳಿಸುವ ಬಗ್ಗೆ ಸಮೀಕ್ಷೆಗಳ ವರದಿ ಬಂದಿದೆ. ಇದರಿಂದ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಇದಕ್ಕಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಸರಕಾರ ರಚಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಯಾವ ಶಾಸಕರು ಕೂಡಾ ಬಿಜೆಪಿ ಸೇರುವುದಿಲ್ಲ ಎಂಬುದು ಇತ್ತೀಚೆಗೆ ನಡೆದ ಪಕ್ಷದ ಶಾಶಕಾಂಗ ಸಭೆಯಲ್ಲಿ ಸ್ಪಷ್ಟವಾಗಿದೆ. ಅಮಾಧಾನ ಇದ್ದ ಶಾಸಕರು ಕೂಡಾ ತಮ್ಮ ನಿಲುವನ್ನು ತಿಳಿಸಿದ್ದಾರೆ. ಆದರೂ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಆಸೆಯಿಂದ ಸಮ್ಮಿಶ್ರ ಸರಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ದೇಶದ ಸಾಲ 40 ಲಕ್ಷ ಕೋಟಿ ರೂ. ಆಗಿದ್ದರೆ ಈಗ ಈ ಸಾಲ 82 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕೇಂದ್ರ ಸರಕಾರ ಕಳೆದ ಐದು ವರ್ಷದ ಅವಧಿಯಲ್ಲಿ ಬರೀ ಸಾಲ ಮಾಡಿದ್ದೇ ಸಾಧನೆ. ನಾನು ಹಿಂಬಾಗಿನ ಮೂಲಕ ರಾಜಕೀಯ ಮಾಡುತ್ತಿದ್ದೇನೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ರಾಜ್ಯ ಸಭೆ ಸದಸ್ಯರಾಗಿರುವ 18 ಮಂದಿ ಪ್ರಮುಖ ಸಚಿವ ಸ್ಥಾನ ಪಡೆದಿದ್ದಾರೆ. ಇದು ಯಾವ ಬಾಗಿಲಿನ ರಾಜಕೀಯ ಎಂದು ಐವನ್ ಪ್ರಶ್ನಿಸಿದರು.
ವಿಜಯಾ ಬ್ಯಾಂಕ್ ಉಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಹಣಕಾಸು ಸಚಿವರಿಗೆ ಬರೇ ಮನವಿ ಪತ್ರ ಸಲ್ಲಿಸಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಸಾಧ್ಯವಾದರೆ ಅವರು ದಿಲ್ಲಿಗೆ ಕರಾವಳಿಯ ಪ್ರತಿನಿಧಿಗಳ ನಿಯೋಗ ಕೊಂಡೊಯ್ದು ಒತ್ತಡ ಹಾಕಲಿ ಎಂದು ಐವನ್ ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಚಾಲ್, ಖಾಲಿದ್, ಮುಸ್ತ, ಯತಿರಾಜ್, ಪೀಯುಸ್ ರಾಡ್ರಿಗಸ್, ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಅವಕಾಶ ದೊರೆತರೆ ನಳಿನ್ ವಿರುದ್ಧ ಸ್ಪರ್ಧೆಗೆ ಸಿದ್ಧ !
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾಕತ್ತಿದ್ದರೆ ನಳಿನ್ ವಿರುದ್ಧ ಐವನ್ ನಿಂತು ಗೆಲ್ಲಲಿ ಎಂದು ಬಿಜೆಪಿಯವರು ಸವಾಲು ಹಾಕಿದ್ದಾರೆ. ಈ ಸವಾಲನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ. ಪಕ್ಷ ಅವಕಾಶ ನೀಡಿದರೆ ಖಂಡಿತಾ ಸ್ಪರ್ಧಿಸಿ ನಳಿನ್ ಕುಮಾರ್ ಅವರನ್ನು ಸೋಲಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.







