ಶಿವಕುಮಾರ ಸ್ವಾಮೀಜಿಗೆ ‘ನೊಬೆಲ್ ಪ್ರಶಸ್ತಿ’ ನೀಡಬೇಕು: ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಜ. 23: ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಸೇವೆ ‘ಭಾರತ ರತ್ನ’ದ ಜತೆಗೆ 'ನೊಬೆಲ್ ಪ್ರಶಸ್ತಿ'ಗೆ ಅರ್ಹವಾಗಿದ್ದು, ಅವರಿಗೆ ಮರಣೋತ್ತರ ಭಾರತರತ್ನ ಹಾಗೂ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ ಕ್ರಿಯಾ ಸಮಾಧಿ ವೇಳೆ ಶಾಂತಿ ಕಾಪಾಡಿದ ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಭದ್ರತೆಗಾಗಿ ಡಿಜಿಪಿ, ಎಡಿಜಿಪಿ, ಐಜಿಪಿ ಸೇರಿದಂತೆ 7 ಮಂದಿ ಎಸ್ಪಿಗಳು, 4 ಮಂದಿ ಪೊಲೀಸ್ ಮುಖ್ಯಾಧಿಕಾರಿಗಳು, 29 ಡಿವೈಎಸ್ಪಿಗಳು, 92 ಮಂದಿ ವೃತ್ತ ನಿರೀಕ್ಷಕರು, 174 ಪಿಎಸ್ಸೈಗಳು, 600 ಗೃಹ ರಕ್ಷಕದಳ ಸಿಬ್ಬಂದಿ ಸೇರಿದಂತೆ 5 ಸಾವಿರಕ್ಕೂ ಅಧಿಕ ಮಂದಿಯನ್ನು ನಿಯೋಜನೆ ಮಾಡಲಾಗಿತ್ತು ಎಂದು ಹೇಳಿದರು.
ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದು, 15 ಲಕ್ಷಕ್ಕೂ ಅಧಿಕ ಮಂದಿಗೆ ಭದ್ರತೆ ಒದಗಿಸಲಾಗಿದೆ. ಶ್ರೀಮಠದ ಸಿಬ್ಬಂದಿ ಮತ್ತು ಭಕ್ತರು, ವಿದ್ಯಾರ್ಥಿಗಳು ಉತ್ತಮ ಸಹಕಾರ ನೀಡಿದ್ದು, ನಿಜಕ್ಕೂ ಅಭಿನಂದನೀಯ ಎಂದು ಅವರು ಶ್ಲಾಘಿಸಿದರು.
ಶ್ರೀಗಳು 90 ವರ್ಷಗಳ ಕಾಲ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಆಶ್ರಯ ಮತ್ತು ದಾಸೋಹದ ಮೂಲಕ ಲಕ್ಷಾಂತರ ಮಂದಿಯ ಜೀವನ ರೂಪಿಸಿದ್ದಾರೆ. ಅವರ ಲಿಂಗೈಕ್ಯ ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ. ಶ್ರೀಗಳ ನಿಸ್ವಾರ್ಥ ಸೇವೆ ಮನುಕುಲಕ್ಕೆ ಮಾದರಿ ಎಂದು ಪಾಟೀಲ್ ಸ್ಮರಿಸಿದರು.
ಸ್ವಾತಂತ್ರ್ಯ ನಂತರ ಶಿಕ್ಷಣದ ಅಗತ್ಯತೆ ಹೆಚ್ಚಾಗಿದ್ದ ಕಾಲದಲ್ಲಿ ಶ್ರೀಗಳು ವಸತಿ ಸಹಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ನೆರವಾಗಿದ್ದಾರೆ. ಈಗ ವಿವಿಧ ಹಾಸ್ಟೆಲ್ ಗಳು ಶಿಕ್ಷಣದ ಸೇವೆ ನೀಡುತ್ತಿವೆ. ಆದರೆ, ಆಗಿನ ಕಾಲದಲ್ಲಿ ಅದ್ಯಾವುದೂ ಇರಲಿಲ್ಲ. ಶ್ರೀಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಲಕ್ಷಾಂತರ ಮಂದಿಯ ಜೀವನ ರೂಪಿಸಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈ ವಿಚಾರದಲ್ಲಿ ನಾವು ರಾಜಕಾರಣ ಮಾಡಲು ಇಚ್ಚಿಸುವುದಿಲ್ಲ. ಬಿಜೆಪಿಯವರನ್ನೂ ಒಳಗೊಂಡಂತೆ ಎಲ್ಲರೂ ಸೇರಿ ಶ್ರೀಗಳಿಗೆ ಗೌರವ ಸೂಚಿಸಬೇಕಿದೆ. ಪ್ರಧಾನಿ ಮೋದಿಯವರಿಗೂ ಶ್ರೀಗಳ ಸೇವೆ ಗೊತ್ತಿದೆ ಎಂದರು.
ಔರಾದ್ಕರ್ ಸಮಿತಿ ವರದಿ ಜಾರಿ: ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ಸಮಿತಿ ನೀಡಿರುವ ವರದಿ ಜಾರಿಗೆ ಕ್ರಮ ವಹಿಸಲಾಗುವುದು. ಮುಂದಿನ ಬಜೆಟ್ ಮಂಡನೆ ವೇಳೆ ಸಮಿತಿ ಶಿಫಾರಸ್ಸು ಜಾರಿಗೊಳಿಸಲಾಗುವುದು ಎಂದರು.







