ಸೋಗಿನ ಸಮಾಜವಾದಿಗಳು ಅಪಾಯಕಾರಿ: ಡಾ.ಭಂಡಾರಿ

ಉಡುಪಿ, ಜ.23: ಸಮಾಜವಾದದ ನೈಜ ಆಶಯವನ್ನು ಈಡೇರಿಸದೆ ತೋರ್ಪಡಿಕೆಗಾಗಿ ಸಮಾಜವಾದಿಗಳ ಸೋಗು ಹಾಕಿಕೊಂಡಿರುವವರು ಬಹಳ ಅಪಾಯಕಾರಿ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಉಡುಪಿ ಜನಪರ ವೇದಿಕೆಯ ತಿಂಗಳ ಕಾರ್ಯಕ್ರಮ ಸರಣಿಯಲ್ಲಿ ಇತ್ತೀಚೆಗೆ ಜರಗಿದ ಕಾಸರಗೋಡಿನ ಕನ್ನಡ ಹೋರಾಟಗಾರ, ಸಾಹಿತಿ ದಿ. ಗಣಪತಿ ದಿವಾಣ ಸಂಸ್ಮರಣೆಯಲ್ಲಿ ಹಿರಿಯ ಸಮಾಜವಾದಿ ಅಮ್ಮೆಂಬಳ ಆನಂದ ಅವರಿಗೆ ದಿ.ಗಣಪತಿ ದಿವಾಣ ಸಂಸ್ಮರಣ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.
ಉಡುಪಿಯಲ್ಲಿ ಹಾಜಿ ಅಬ್ದುಲ್ಲಾ ದಾನವಾಗಿ ನೀಡಿದ 4.5ಎಕರೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿದ ಸರಕಾರದ ನಡೆ ಖಂಡನೀಯ. ಸೋಗಿನ ಸಮಾಜ ವಾದಿ ನಾಯಕರು ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿದ್ದಾರೆ. ಬಡವರಿಗಾಗಿ ಆಸ್ಪತ್ರೆಗಳನ್ನು ನಡೆಸುವುದೂ ಸರಕಾರಕ್ಕೆ ಕ್ಟವೇ ಎಂದು ಅವರು ಪ್ರಶ್ನಿಸಿದರು.
ಮೂಲ ಸಮಾಜವಾದದ ಬಗ್ಗೆ ಉಪನ್ಯಾಸ ನೀಡಿದ ಅಮ್ಮೆಂಬಳ ಆನಂದ, ಆಂತರಿಕವಾಗಿ ಫ್ಯಾಸಿಸ್ಟ್ ಮನಸ್ಥಿತಿಯನ್ನು ಹೊಂದಿದ್ದರೂ ತೋರ್ಪಡಿಕೆಗಾಗಿ ಸಮಾಜವಾದಿಯಂತೆ ನಟಿಸುವ ನಾಯಕರಿದ್ದಾರೆ. ಸಂವಿಧಾನದ ಸಮಾಜವಾದಿ ಪರಿಕಲ್ಪನೆ ಸಂಪೂರ್ಣವಾಗಿ ಸಾಕಾರಗೊಳ್ಳದಿರಲು ಈ ಫ್ಯಾಸಿಸ್ಟ್ ುನಃಸ್ಥಿತಿಯ ವರೇ ಕಾರಣ ಎಂದರು.
ಜನಪರ ವೇದಿಕೆ ಅಧ್ಯಕ್ಷ ಪ್ರಕಾಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದಿವಾಣ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಶ್ರೀರಾಮ ದಿವಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರತ್ಕಲ್ ಎನ್‌ಐಟಿಕೆ ಸಹ ಪ್ರಾಧ್ಯಾಪಕ ಡಾ.ಶಶಿಕಾಂತ್ ಕೌಡೂರು ಮತ್ತು ಶಶಿಕಿರಣ್ ಮಣಿಪಾಲ್ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.







