ಕಾಶ್ಮೀರದಲ್ಲಿ ಸ್ವಚ್ಛ ರಾಜಕೀಯಕ್ಕಾಗಿ ಶಾ ಫೈಝಲ್‌ರಿಂದ ನಿಧಿ ಸಂಗ್ರಹ

ಶ್ರೀನಗರ,ಜ.23: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಚ್ಛ ರಾಜಕೀಯ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಮಾಜಿ ಐಎಎಸ್ ಅಧಿಕಾರಿ ಶಾ ಫೈಝಲ್ ನಿಧಿಸಂಗ್ರಹ ಅಭಿಯಾನವನ್ನು ಆರಂಭಿಸಿದ್ದಾರೆ. ಇದು ಬದಲಾವಣೆಗಾಗಿ ಜನರ ಚಳುವಳಿಯಾಗಿದೆ ಎಂದು 2010ರ ಬ್ಯಾಚ್‌ನ ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಫೈಝಲ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಫೈಝಲ್, “ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಚ್ಛ ರಾಜಕೀಯ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ನಡೆಸುವ ಹೋರಾಟದಲ್ಲಿ ಕೈಜೋಡಿಸಿ. ಸಣ್ಣ ಮೊತ್ತದ ದೇಣಿಗೆಯನ್ನು ನೀಡುವ ಮೂಲಕ ಶಾ ಫೈಝಲನ್ನು ಬೆಂಬಲಿಸಿ” ಎಂದು ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳು, ಕೇಂದ್ರ ಸರಕಾರದಿಂದ ಪ್ರಾಮಾಣಿಕ ಪ್ರಯತ್ನದ ಕೊರತೆ, ಭಾರತೀಯ ಮುಸ್ಲಿಮರನ್ನು ಹಿಂದುತ್ವ ಶಕ್ತಿಗಳು ಎರಡನೇ ದರ್ಜೆ ಪ್ರಜೆಗಳಾಗಿ ಸೀಮಿತಗೊಳಿಸಿರುವುದು ಇತ್ಯಾದಿಗಳ ವಿರುದ್ಧ ಪ್ರತಿಭಟನೆಯ ಸೂಚಕವಾಗಿ ತನ್ನ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಫೈಝಲ್ ತಿಳಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಫೈಝಲ್ ಸ್ಪಷ್ಟಪಡಿಸಿದ್ದರೂ ಅವರು ಈವರೆಗೆ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.





