ಸಿಖ್ಖರಿಗಷ್ಟೇ ಕತಾರ್ಪುರ ಪ್ರವೇಶಕ್ಕೆ ಅವಕಾಶ: ಪಾಕಿಸ್ತಾನದ ವಿರುದ್ಧ ಅಮರಿಂದರ್ ಸಿಂಗ್ ಆಕ್ರೋಶ

ಚಂಡೀಗಡ,ಜ.23: ಕತಾರ್ಪುರದಲ್ಲಿರುವ ಸಾಹಿಬ್ ಗುರುದ್ವಾರಕ್ಕೆ ಕೇವಲ ಸಿಖ್ ಯಾತ್ರಾರ್ಥಿಗಳಿಗಷ್ಟೇ ಪ್ರಯಾಣಕ್ಕೆ ಅನುಮತಿ ನೀಡುವ ಪಾಕಿಸ್ತಾನ ಸರಕಾರದ ಪ್ರಸ್ತಾವನೆಯ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ಗುರು ನಾನಕ್ ಕೇವಲ ಸಿಖ್ಖರಿಗಷ್ಟೇ ಮಾತ್ರವಲ್ಲ ಎಲ್ಲ ಸಮುದಾಯಗಳಿಗೂ ಮುಖ್ಯವಾಗಿ ಹಿಂದುಗಳಿಗೆ ಪೂಜನೀಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕತಾರ್ಪುರ ಕಾರಿಡಾರ್ ಮೂಲಕ ತನ್ನ ಪ್ರದೇಶಕ್ಕೆ ಪ್ರವೇಶವನ್ನು ನಿಯಂತ್ರಿಸುವ ಒಪ್ಪಂದದ ಕರಡನ್ನು ಪಾಕಿಸ್ತಾನ ಕಳುಹಿಸಿದಾಗ ಈ ವಿಷಯವನ್ನು ಪ್ರಸ್ತಾಪಿಸುವಂತೆ ಸಿಂಗ್ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ. ತನ್ನ ಭೂಭಾಗದ ಸುರಕ್ಷತೆ ಮತ್ತು ರಕ್ಷಣೆಗೆ ಸಂಬಂಧಿಸಿ ಷರತ್ತುಗಳನ್ನು ವಿಧಿಸುವ ಹಕ್ಕು ಪಾಕಿಸ್ತಾನಕ್ಕಿದೆ. ಆದರೆ ಪ್ರಥಮ ಸಿಖ್ ಗುರುವಿನ ಸಿದ್ಧಾಂತಗಳು ಕೇವಲ ಸಿಖ್ಖರಿಗಷ್ಟೇ ಅಲ್ಲ ಇತರ ಧರ್ಮದ ಜನರಿಂದಲೂ ಅನುಕರಿಸಲ್ಪಡುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಸಿಖ್ ಸಿದ್ಧಾಂತವು ಸಮಾನತೆಯನ್ನು ಬೋಧಿಸುತ್ತದೆ. ಎಲ್ಲ ಗುರುದ್ವಾರಗಳಿಗೆ ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇಲ್ಲಿ ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ. ಪಾಕಿಸ್ತಾನ ಈಗಾಗಲೇ ಈ ಬಗ್ಗೆ ಕರಡು ಒಪ್ಪಂದವನ್ನು ರಚಿಸಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಮಾತನಾಡಿದ ಸಿಂಗ್ ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ ಹೇರುವ ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ. ಗುಂಪಿನಲ್ಲಿ ಹದಿನೈದು ಜನರಷ್ಟೇ ಇರಬೇಕು ಎಂದು ನಿರ್ಬಂಧ ಹೇರುವುದು ಸರಿಯಲ್ಲ ಮತ್ತು ಒಂಟು ಯಾತ್ರಾರ್ಥಿಗೂ ಯಾತ್ರೆಗೆ ಅನುಮತಿ ನೀಡಬೇಕು. ಒಂದು ದಿನಕ್ಕೆ ಕೇವಲ 500 ಯಾತ್ರಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡುವುದು ಕೂಡಾ ಸರಿಯಲ್ಲ. 2019ರಲ್ಲಿ ಮುಖ್ಯವಾಗಿ ಗುರು ನಾನಕರ 550ನೇ ಜನ್ಮದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧವನ್ನು ತೆಗೆದುಹಾಕಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.







