'ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ ನೀಡಿ, ಇಲ್ಲವೇ ಟೋಲ್ ಸಂಗ್ರಹ ನಿಲ್ಲಿಸಿ'
ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಂಸದ ನಳಿನ್ ಆಕ್ರೋಶ

ಮಂಗಳೂರು, ಜ. 23: ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಹಾಗೂ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಜ. 28ರೊಳಗೆ ನವಯುಗ ಗುತ್ತಿಗೆ ಸಂಸ್ಥೆಯ ವ್ಯವಸ್ಥಾಪಕರು ಮಂಗಳೂರಿಗೆ ಆಗಮಿಸಿ ಕಾಮಗಾರಿಗೆ ಪೂರ್ಣಗೊಳಿಸುವ ವಾಗ್ದಾನ ನೀಡಬೇಕು. ಇಲ್ಲವಾದರೆ, ತಲಪಾಡಿಯಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಬೇಕು ಅಥವಾ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್, ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸದ ಅಧಿಕಾರಿಗಳ ಬಂಧನ ನಡೆಸಲು ಸಭೆಗೆ ಪೊಲೀಸರನ್ನು ಕರೆಸಿದ ಪ್ರಸಂಗವೂ ನಡೆಯಿತು.
‘‘ಮೇಲ್ಸೇತುವೆಗಳನ್ನು ಕಳೆದ ಆಗಸ್ಟ್‌ಗೆ, ನಂತರ ಡಿಸೆಂಬರ್, ಫೆಬ್ರವರಿಗೆ ಮುಗಿಸುವ ಗಡುವು ಕೊಟ್ಟಿದ್ದೀರಿ. ಈಗ ಮತ್ತೆ ಮಾರ್ಚ್, ಮೇ ಎನ್ನುವಾಗ, ಕಾಯುವ ತಾಳ್ಮೆ ಇಲ್ಲ. ನಿಮ್ಮ ಬಂಧನ ನಡೆದು, ಜೈಲಿನಲ್ಲಿರಿ. ಆಗ ನಿಮ್ಮ ಹಿರಿಯ ಅಧಿಕಾರಿಗಳು ಓಡಿ ಬರುತ್ತಾರೆ. ಇಲ್ಲವೇ ಟೋಲ್ ಸಂಗ್ರಹ ಬಂದ್ ಮಾಡಿ’’ ಎಂದು ಗುತ್ತಿಗೆದಾರ ನವಯುಗ ಕಂಪನಿ ಪ್ರತಿನಿಧಿಗಳಿಗೆ ನಳಿನ್ ಎಚ್ಚರಿಸಿದರು.
ಮೇಲ್ಸೇತುವೆ ಕಾಮಗಾರಿಗೂ ಟೋಲ್ ಸಂಗ್ರಹಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಟೋಲ್ ನಿಲ್ಲಿಸಲು ಸಾಧ್ಯವಿಲ್ಲ. ನಮಗೆ ಇನ್ನಷ್ಟು ಕಾಲಾವಕಾಶ ಕೊಡಿ. ಕಂಪನಿ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ ಎಂದು ನವಯುಗ ಕಂಪನಿಯ ಮಹಾನಿರ್ದೇಶಕ ಎ.ಎಸ್.ಎನ್. ಮೂರ್ತಿ, ಮುಖ್ಯ ಯೋಜನಾ ನಿರ್ದೇಶಕ ಶಂಕರ್ ರಾವ್ ಹೇಳಿದಾಗ, ನಿಮಗೆ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ. ನಾನು ಸ್ಥಳೀಯ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುತ್ತೇನೆ ಎಂದು ನಳಿನ್ ಹೇಳಿದರು.
ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್ ಮಾತನಾಡಿ, ಈಗಾಗಲೇ ನಂತೂರು, ಪಂಪ್‌ವೆಲ್ ಕಾಮಗಾರಿ ಅವ್ಯವಸ್ಥೆ ವಿರುದ್ಧ ಗುತ್ತಿಗೆದಾರರ ಮೇಲೆ ಕೇಸು ದಾಖಲಿಸಿದ್ದೇವೆ. ಸಾರ್ವಜನಿಕರಿಗೆ ಕಿರಿಕಿರಿ ಹಿನ್ನೆಲೆಯಲ್ಲಿ ಇನ್ನಷ್ಟು ಕೇಸು ದಾಖಲಿಸಲು ಅವಕಾಶಗಳಿವೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಅಧಿಕಾರಿ ಆರ್.ಕೆ.ಸೂರ್ಯವಂಶಿ ಮಾತನಾಡಿ, ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಯಾಕೆ ಸ್ಥಗಿತಗೊಳಿಸಬಾರದು ಎಂದು ಸಚಿವಾಲಯಕ್ಕೆ ಪತ್ರ ಬರೆಯಬಹುದು ಎಂದರು.
ಸ್ಥಗಿತಗೊಂಡಿರುವ ಬಿ.ಸಿ.ರೋಡ್- ಗುಂಡ್ಯ ಕಾಮಗಾರಿ ತಕ್ಷಣ ಆರಂಭಿಸಬೇಕು. ಫೆ.3ರೊಳಗೆ ಹೆದ್ದಾರಿ ಹೊಂಡಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಯೋಜನಾ ನಿರ್ದೇಶಕರು ಹಾಗೂ ಗುತ್ತಿಗೆದಾರರ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಸಂಸದ ನಳಿನ್ ಎಚ್ಚರಿಸಿದರು.
ಮಂಗಳೂರು- ಮೂಡುಬಿದಿರೆ, ಕಾರ್ಕಳ ಚತುಷ್ಪಥ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡುವಂತೆ, ಫೆ.20ರ ವೇಳೆಗೆ ಕೇಂದ್ರ ಸಚಿವರಿಂದ ಕಾಮಗಾರಿಗೆ ಶಿಲಾನ್ಯಾಸ ಮಾಡಲು ಅವಕಾಶ ವಾಡಿ ಕೊಡುವಂತೆ ನಳಿನ್ ಸೂಚಿಸಿದರು.
ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಯೋಜನಾ ನಿರ್ದೇಶಕ ಎಲ್.ಎಚ್.ಲಿಂಗೇಗೌಡ, ತುಮಕೂರು ವಿಭಾಗದ ಯೋಜನಾ ನಿರ್ದೇಶಕ ಶಿರೀಶ್ ಗಂಗಾಧರ್, ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ್ ಕುಮಾರ್, ಎಂಜಿನಿಯರ್ ಅಜಿತ್ ಕುಮಾರ್, ಸಲಹೆಗಾರ ಕೆಎನ್‌ಎಸ್‌ಪಿ ಕಾಮರಾಜ್, ನವಯುಗದ ಕಿರಿಯ ಎಂಜಿನಿಯರ್ ಮಲ್ಲಿಕಾರ್ಜುನ, ಎಲ್ ಆ್ಯಂಡ್ ಟಿ ಕಂಪನಿಯ ಮಹಾ ಯೋಜನಾ ಪ್ರಬಂಧಕ ವಾದಿರಾಜ್ ಕಟ್ಟಿ ಮತ್ತಿತರರಿದ್ದರು.
ಜನರು ತಾಳ್ಮೆ ಕಳೆದುಕೊಳ್ಳುವ ಮೊದಲು ಸಮಸ್ಯೆ ಬಗೆಹರಿಸಿ
ಡಿಸಿಪಿ ಹನುಮಂತರಾಯ ಮಾತನಾಡಿ, ಪ್ರತಿನಿತ್ಯ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳಿಂದ ಮಂಗಳೂರಿನ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಜನರು ಕಾನೂನು ಕೈಗೆತ್ತಿಕೊಂಡು ರಸ್ತೆಗೆ ಇಳಿದು ಟೋಲ್ ಬಂದ್ ಮಾಡಲು ಹೊರಟರೆ ನಿಮಗೇ ಕಷ್ಟ. ಆದ್ದರಿಂದ ಪರಿಹಾರ ಕಂಡುಕೊಳ್ಳಿ ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಫೆ. 28ರ ಸಭೆಯಲ್ಲಿ ನಿರ್ಧಾರವಾಗದಿದ್ದರೆ ಟೋಲ್ ಸಂಗ್ರಹ ಸ್ಥಗಿತ
ನವಯುಗ ಕಂಪನಿಯ ಆಡಳಿತ ನಿರ್ದೇಶಕರನ್ನು ಫೆ.28ರಂದು ಮಂಗಳೂರಿಗೆ ಕರೆಸಿ, ಸಂಜೆ ಐದು ಗಂಟೆಗೆ ಸಭೆ ನಡೆಸಲಾಗುವುದು. ಒಂದು ವೇಳೆ ಕಾಮಗಾರಿ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಾರದಿದ್ದಲ್ಲಿ ಟೋಲ್ ಸಂಗ್ರಹ ಸ್ಥಗಿತ ಮಾಡಲಾಗುವುದು. ಮತ್ತೆ ಕಾಲಾವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ನಳಿನ್ ಹೇಳಿದರು.







