ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ವಿಫಲ: ಇಬ್ಬರು ಅಧಿಕಾರಿಗಳ ಅಮಾನತು

ಶಿವಮೊಗ್ಗ, ಜ. 23: ಜಿಲ್ಲೆಯ ಸಾಗರ ತಾಲೂಕು ಸೇರಿದಂತೆ ವಿವಿಧೆಡೆ ವ್ಯಾಪಕವಾಗಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ಆರೋಪದ ಮೇರೆಗೆ ಆರೋಗ್ಯ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಆರೋಗ್ಯ ಅಧಿಕಾರಿ (ಡಿಹೆಚ್ಓ) ಬಿ.ಸಿ.ವೆಂಕಟೇಶ್ ಹಾಗೂ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಡಾ. ರವಿಕುಮಾರ್ ಅಮಾನತುಗೊಂಡ ಹಿರಿಯ ಅಧಿಕಾರಿಗಳೆಂದು ಗುರುತಿಸಲಾಗಿದೆ. ಬೆಂಗಳೂರಿನ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಈ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಂಗನ ಕಾಯಿಲೆ ತೀವ್ರ ಸ್ವರೂಪದಲ್ಲಿ ವ್ಯಾಪಿಸಿದೆ. ಕೆಲವರು ಸಾವನ್ನಪ್ಪಿದ್ದಾರೆ. ಆದರೆ ರೋಗ ಹರಡದಂತೆ ನಿಯಂತ್ರಿಸುವಲ್ಲಿ ಸೂಕ್ತ ಮುಂಜಾಗ್ರತೆ ವಹಿಸಿಲ್ಲ. ನಿಯಂತ್ರಣಕ್ಕೂ ಪರಿಣಾಮಕಾರಿ ಕ್ರಮ ಅನುಷ್ಠಾನಗೊಳಿಸಿಲ್ಲ. ಈ ಇಬ್ಬರು ಅಧಿಕಾರಿಗಳು ಸಮರ್ಪಕವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲರಾದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ.
ಹಿರಿಯ ಅಧಿಕಾರಿಗಳಿಬ್ಬರ ಅಮಾನತು ಆದೇಶವು, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಸಂಚಲನ ಉಂಟು ಮಾಡಿದೆ. ಕರ್ತವ್ಯ ಲೋಪ ಎಸಗಿದರೆ, ಎಲ್ಲಿ ತಮ್ಮ ತಲೆದಂಡವಾಗುವುದೋ ಎಂಬ ಆತಂಕದಿಂದ ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿಗಳು ಇದೀಗ ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾರೆ.
ನೇಮಕ: ಈ ಹಿಂದೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಹಾಗೂ ಪ್ರಸ್ತುತ ಮಡಿಕೇರಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿರುವ ಡಾ. ರಾಜೇಶ್ ಸುರಗಿಹಳ್ಳಿಯವರನ್ನು ಡಿ.ಹೆಚ್.ಓ ಆಗಿ ನೇಮಿಸಿ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಇದೇ ವೇಳೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತದ ವಿಫಲ: ಮೊದಲು ಸಾಗರ ತಾಲೂಕಿನ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮದಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿತ್ತು. ನಂತರ ಈ ಕಾಯಿಲೆಯು ಹೊಸನಗರ, ತೀರ್ಥಹಳ್ಳಿ ಸೇರಿದಂತೆ ನೆರೆಹೊರೆ ಜಿಲ್ಲೆಗಳಿಗೂ ವ್ಯಾಪಿಸಿತ್ತು. ಸಾಗರ ತಾಲೂಕೊಂದರಲ್ಲಿಯೇ ಕಾಯಿಲೆಯಿಂದ 12 ಜನ ಮೃತಪಟ್ಟಿದ್ದರು. ನೂರಾರು ಜನ ಶಂಕಿತ ರೋಗಕ್ಕೆ ತುತ್ತಾಗಿದ್ದರು.
ಮಂಗನ ಕಾಯಿಲೆ ತಡೆಗಟ್ಟುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಂಡಿಲ್ಲ. ಇದರಿಂದ ನಾಗರಿಕರ ಸಾವು-ನೋವು ಹೆಚ್ಚಾಗಿದೆ ಎಂದು ಆರೋಪಿಸಿ ಹಲವು ಜನಪರ ಸಂಘಟನೆಗಳು ಶಿವಮೊಗ್ಗ, ಸಾಗರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದ್ದವು.







