ಏರ್ ಇಂಡಿಯಾದ ಮಾಜಿ ಮುಖ್ಯಸ್ಥ ಜಾಧವ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು

ಹೊಸದಿಲ್ಲಿ, ಜ.23: ಪ್ರಧಾನ ವ್ಯವಸ್ಥಾಪಕ ದರ್ಜೆಯ ಅಧಿಕಾರಿಗಳ ನೇಮಕದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾದ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅರವಿಂದ ಜಾಧವ್ ಮತ್ತು ಇತರ ನಾಲ್ವರು ಮಾಜಿ ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಮಾಜಿ ಪ್ರಧಾನ ವ್ಯವಸ್ಥಾಪಕಿ(ವೈದ್ಯಕೀಯ ಸೇವೆಗಳು) ಡಾ.ಎಲ್.ಪಿ.ನಖ್ವಾ, ಮಾಜಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಎ.ಕಥ್ಪಾಲಿಯಾ, ಅಮಿತಾಭ್ ಸಿಂಗ್ ಮತ್ತು ರೋಹಿತ್ ಭಾಸಿನ್ ಅವರು ಜಾಧವ್ ಜೊತೆಗೆ ಇತರ ಆರೋಪಿಗಳಾಗಿದ್ದಾರೆ.
ಕ್ರಿಮಿನಲ್ ಒಳಸಂಚಿಗೆ ಸಂಬಂಧಿಸಿದ ಐಪಿಸಿ ಕಲಮ್‌ಗಳು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.
ಜಾಧವ್ ಅವರು 2009-10ರಲ್ಲಿ ಪ್ರಧಾನ ವ್ಯವಸ್ಥಾಪಕರ(ಕಾರ್ಯಾಚರಣೆಗಳು) ಹುದ್ದೆಗಳಿಗೆ ಬಡ್ತಿಗೆ ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ‘ಅಕ್ರಮ’ ಪದೋನ್ನತಿ ಸಮಿತಿಯನ್ನು ರಚಿಸಿದ್ದರೆಂದು ಸಿಬಿಐ ಆರೋಪಿಸಿದೆ. ಕಥ್ಪಾಲಿಯಾ,ಸಿಂಗ್ ಮತ್ತು ಭಾಸಿನ್ ಸೇರಿದಂತೆ ಐವರ ಹೆಸರುಗಳನ್ನು ಸಮಿತಿಯು ಶಿಫಾರಸು ಮಾಡಿತ್ತು. ಕಥ್ಪಾಲಿಯಾರ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ಬಾಕಿಯಿತ್ತಾದರೂ ವಿಚಕ್ಷಣ ವಿಭಾಗವು ಅವರ ಹೆಸರಿಗೆ ಒಪ್ಪಿಗೆಯನ್ನು ನೀಡಿತ್ತು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಹುದ್ದೆಗೆ ಆಯ್ಕೆ ಮಾಡಲಾಗಿದ್ದ ಸಿಂಗ್ ಮತ್ತು ಭಾಸಿನ್ ವಿರುದ್ಧವೂ ದೂರುಗಳು ಬಾಕಿಯಿದ್ದವು ಎಂದೂ ಸಿಬಿಐ ಆರೋಪಿಸಿದೆ.
ಜಾಧವ್ ಅವರು ನಖ್ವಾ ಅವರೊಂದಿಗೆ ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿದ್ದರು ಮತ್ತು ಪದೋನ್ನತಿ ಸಮಿತಿಯ ಸದಸ್ಯೆಯನ್ನಾಗಿ ಅವರನ್ನು ನೇಮಕಗೊಳಿಸಲು ಮತ್ತು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ಅವರಿಗೆ ಬಡ್ತಿ ನೀಡಲು ತನ್ನ ಅಧಿಕಾರವನ್ನು ದುರುಪಯೋಗಿಸಿಕೊಂಡಿದ್ದರು ಎಂದು ಸಿಬಿಐ ಆರೋಪಿಸಿದೆ.







