ಉಡುಪಿ: ಯಕ್ಷಗಾನ ಕೇಂದ್ರಕ್ಕೆ ಮುಂಬೈ ವಿಜ್ಞಾನಿಗಳ ಭೇಟಿ

ಉಡುಪಿ, ಜ.23: ಮುಂಬೈಯ ಬಾಬಾ ಅಣು ವಿಜ್ಞಾನ ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ಸುಮಾರು 30 ಮಂದಿ ನಿವೃತ್ತ ವಿಜ್ಞಾನಿಗಳ ತಂಡ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಜಟಾಯು ಮೋಕ್ಷ’ ಯಕ್ಷಗಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಬಾರ್ಕ್‌ನ ಈ ವಿಜ್ಞಾನಿಗಳು, ಸಂಸ್ಥೆಯ 12ನೇ ಬ್ಯಾಚ್‌ಗೆ ಸೇರಿದವರಾಗಿದ್ದಾರೆ. ಪ್ರವಾಸದಲ್ಲಿರುವ 70ರ ಆಸುಪಾಸಿನಲ್ಲಿರುವ ಈ ಹಿರಿಯ ವಿಜ್ಞಾನಿಗಳು ಗುಂಪಾಗಿ ಉಡುಪಿಗೆ ಆಗಮಿಸಿದ್ದು ಇದೇ ಮೊದಲ ಸಲವಾಗಿದೆ. ಕೇಂದ್ರಕ್ಕೆ ಆಗಮಿಸಿದ ಈ ತಂಡ, ಯಕ್ಷಗಾನದ ನೃತ್ಯ, ಹಾಡುಗಾರಿಕೆ, ಸಂಗೀತ, ಮುಖ ವರ್ಣಿಕೆ ಇವೆಲ್ಲವುಗಳನ್ನು ಅಧ್ಯಯನದ ರೀತಿಯಲ್ಲಿ ಆಸ್ವಾದಿಸಿದರು. ಪ್ರೊ. ನಾರಾಯಣ ಕರ್ಕೇರ, ಡಾ. ಸುರೇಶ್ ರಾ್ ತಂಡದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ, ಕೇಂದ್ರದ ಪ್ರಾಂಶುಪಾಲ ಗುರು ಸಂಜೀವ ಸುವರ್ಣ, ಡಾ. ಅರವಿಂದ ಹೆಬ್ಬಾರ್ ಯಕ್ಷಗಾನದ ಕುರಿತು ವಿವರಣೆ ನೀಡಿದರು. ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ಗಳು ಮತ್ತು ಕಲಾವಿದರಿಂದ ‘ಜಟಾಯು ಮೋಕ್ಷ’ ಯಕ್ಷಗಾನ ನಡೆಯಿತು.








