ಮುಸ್ಲಿಂ ತಂದೆ, ಹಿಂದು ತಾಯಿಗೆ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಹಕ್ಕಿದೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜ.23: ಮುಹಮ್ಮದೀಯ ಕಾನೂನಿನಲ್ಲಿ ಮುಸ್ಲಿಂ ಗಂಡು ಮತ್ತು ಹಿಂದು ಮಹಿಳೆಯ ಮಧ್ಯೆ ನಡೆಯುವ ಮದುವೆ ನಿಯಮಬಾಹಿರ ಎಂದು ಪರಿಗಣಿಸಲ್ಪಟ್ಟಿದ್ದರೂ ಈ ಸಂಬಂಧದಿಂದ ಜನಿಸುವ ಮಕ್ಕಳು ನ್ಯಾಯಸಮ್ಮತವಾಗಿದ್ದು, ತಂದೆಯ ಆಸ್ತಿಯ ಮೇಲೆ ಇವರಿಗೆ ಹಕ್ಕಿದೆ ಎಂದು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ತಿಳಿಸಿದೆ. ಮೂರ್ತಿಪೂಜಕರು ಅಥವಾ ಅಗ್ನಿಯನ್ನು ಆರಾಧಿಸುವ ಮಹಿಳೆಯ ಜೊತೆ ಮುಸ್ಲಿಂ ವ್ಯಕ್ತಿಯ ವಿವಾಹ ಸಿಂಧು (ಸಹೀ)ವೂ ಅಲ್ಲ ಅಸಿಂಧುವೂ (ಬಾತಿಲ್) ಅಲ್ಲ, ಅದೊಂದು ನಿಯಮಬಾಹಿರ (ಫಾಸಿದ್) ವಿವಾಹ. ಈ ಸಂಬಂಧದಿಂದ ಜನಿಸುವ ಮಗುವಿಗೆ ತನ್ನ ತಂದೆಯ ಆಸ್ತಿಯ ಮೇಲೆ ಹಕ್ಕಿದೆ ಎಂದು ನ್ಯಾಯಾಧೀಶರಾದ ಎನ್.ವಿ ರಮಣ ಮತ್ತು ಮೋಹನ್ ಎಂ.ಶಾಂತನಗೌಡರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮುಹಮ್ಮದ್ ಸಲೀಂ ಎಂಬವರು ಹಾಕಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಶ್ರೇಷ್ಠ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಮುಹಮ್ಮದ್ ಸಲೀಂ ಮುಹಮ್ಮದ್ ಇಲ್ಯಾಸ್ ಮತ್ತು ವಲ್ಲಿಯಮ್ಮ ಎಂಬವರ ಮಗನಾಗಿದ್ದಾರೆ. ವಿಚಾರಣಾ ನ್ಯಾಯಾಲಯ ಮತ್ತು ಕೇರಳ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಶಾಂತನಗೌಡರ್, ಮುಸ್ಲಿಂ ಪುರುಷನ ಜೊತೆ ಹಿಂದು ಮಹಿಳೆಯ ವಿವಾಹ ಅಸಹಜವೋ ಅಲ್ಲವೋ ಎಂದು ನಾನು ಈ ವೇಳೆ ಪ್ರಸ್ತಾಪಿಸುವುದಿಲ್ಲ. ಆದರೆ ಈ ಸಂಬಂಧದಲ್ಲಿ ಉಂಟಾಗವ ಸಮಸ್ಯೆಗಳು ಕಾನೂನಿನ ವ್ಯಾಪ್ತಿಗೆ ಬರುತ್ತವೆ ಮತ್ತು ಹುಟ್ಟಿದ ಮಕ್ಕಳು ನ್ಯಾಯಸಮ್ಮತವಾಗಿರುತ್ತಾರೆ ಎಂದು ತಿಳಿಸಿದ್ದಾರೆ.







