ಸಾರಕ್ಕಿ ಕೆರೆ ಅಭಿವೃದ್ದಿಗೆ 10 ಕೋಟಿ ರೂ. ಅನುದಾನ ಅಗತ್ಯ: ಶಾಸಕ ಸತೀಶ್ ರೆಡ್ಡಿ

ಬೆಂಗಳೂರು, ಜ.23: ಒಂಬತ್ತು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿಯಾಗುತ್ತಿರುವ ಸಾರಕ್ಕಿ ಕೆರೆಗೆ ಇನ್ನೂ 10 ಕೋಟಿ ರೂ. ಹೆಚ್ಚಿನ ಅನುದಾನವನ್ನು ಕೇಳಲಾಗಿದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹೇಳಿದರು.
ಬುಧವಾರ ಅಧಿಕಾರಿಗಳೊಂದಿಗೆ ಜೆಪಿ ನಗರದ ಸಾರಕ್ಕಿ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಪಿ ನಗರದ ಹೃದಯ ಭಾಗದಲ್ಲಿರುವ ಸಾರಕ್ಕಿ ಕೆರೆ ಒತ್ತುವರಿ ಹಾಗೂ ಕಲುಷಿತ ನೀರಿನಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡಿತ್ತು. ಈ ಭಾಗದ ಜನತೆಗೆ ಒಳ್ಳೆಯ ಪರಿಸರ ನೀಡುವ ಹಾಗೂ ಅಂತರ್ಜಲ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕೊಳಚೆ ನೀರಿನಿಂದ ತುಂಬಿದ್ದ ಕೆರೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೊಳಚೆ ನೀರು ಕೆರೆಗೆ ಹರಿದು ಬರುವುದನ್ನು ಸಂಪೂರ್ಣ ನಿಯಂತ್ರಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಮಳೆ ನೀರು ಕೆರೆಗೆ ಹರಿದು ಬರುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾಮಗಾರಿಗಳು ಕಳೆದ ಒಂದು ವರ್ಷದಿಂದ ನಡೆಯುತ್ತಿವೆ. ಈ ಕಾಮಗಾರಿಗಳು ಇನ್ನು 2 ತಿಂಗಳಲ್ಲಿ ಮುಗಿಯಬೇಕಾಗಿದೆ. ಅದಕ್ಕಾಗಿ 10 ಕೋಟಿ ರೂ. ಹೆಚ್ಚಿನ ಅನುದಾನದ ಕೋರಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.







