ಕನ್ನಡಿಗರ ಮೊದಲ ರಾಜಧಾನಿ ಚಂದ್ರವಳ್ಳಿ ಸಂರಕ್ಷಣೆಗೆ ಕನ್ನಡ ಗೆಳೆಯರ ಬಳಗದಿಂದ ಸರಕಾರಕ್ಕೆ ಮನವಿ
ಬೆಂಗಳೂರು, ಜ.23: ಕನ್ನಡಿಗರ ಮೊದಲ ರಾಜವಂಶ ಕದಂಬರ ರಾಜಾಡಳಿತದಲ್ಲಿ ರಾಜಧಾನಿಯಾಗಿದ್ದ ಚಿತ್ರದುರ್ಗದ ಚಂದ್ರವಳ್ಳಿ ಪ್ರದೇಶವು ಅತಿಕ್ರಮಣಕ್ಕೆ ಒಳಗಾಗಿದ್ದು, ಸಂರಕ್ಷಿಸಬೇಕೆಂದು ಕನ್ನಡ ಗೆಳೆಯರ ಬಳಗದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಕುರಿತು ಹಿರಿಯ ಸಂಶೋಧಕ ಚಿದಾನಂದಮೂರ್ತಿ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಮಯೂರವರ್ಮನ ಕಾಲದ ಶಾಸನ, ಕೆರೆ ಚಂದ್ರವಳ್ಳಿಯಲ್ಲಿವೆ. ಇದೇ ಸ್ಥಳದಲ್ಲಿ ಅಂಕಲಿಮಠ ಎಂದು ಕರೆಯುವ ಕದಂಬ ರಾಜರು ಪೂಜಿಸುತ್ತಿದ್ದ ಗುಹಾದೇವಾಲಯ ಹಾಗೂ ಧವಳಪ್ಪನಬೆಟ್ಟವೆಂದು ಕರೆಯುವ ಎತ್ತರವಾದ ಶಿಲಾಬೆಟ್ಟವಿರುವ ಸ್ಥಳಗಳಿವೆ. ಸದ್ಯ ಈ ಸ್ಥಳಗಳು ಅತಿಕ್ರಮಣಕ್ಕೆ ತುತ್ತಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಯೂರವರ್ಮನ ಶಾಸನವಿರುವ ಬೃಹತ್ ಬಂಡೆಯ ಪಕ್ಕದಲ್ಲಿ ಸಿದ್ಧೇಶ್ವರ ದೇವಾಲಯವಿದೆ. ಇದನ್ನು ಹುಲೇಗೊಂದಿ ಸಿದ್ಧೇಶ್ವರ ಎಂದು ಕರೆಯುವುದಿದೆ. ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಚಂದ್ರವಳ್ಳಿಯ ಶಾಸನವನ್ನು ಖ್ಯಾತ ವಿದ್ವಾಂಸ ಡಾ. ಎಂ.ಎಚ್.ಕೃಷ್ಣ ಸಂಶೋಧಿಸಿ ಬೆಳಕಿಗೆ ತಂದರು. ಇತ್ತೀಚೆಗೆ ಈ ದೇವಾಲಯವನ್ನು ನವೀಕರಣದ ಹೆಸರಿನಲ್ಲಿ ಪೂರ್ಣವಾಗಿ ವಿರೂಪಗೊಳಿಸಿದ್ದಾರೆ. ಅವಶೇಷಗಳನ್ನು ನೆಲಸಮ ಮಾಡಿದ್ದಾರೆ. ಕನ್ನಡದ ಮೊಟ್ಟಮೊದಲ ರಾಜವಂಶದ ರಾಜಧಾನಿ ಚಂದ್ರವಳ್ಳಿ ವಿರೂಪಗೊಂಡಿರುವುದು ದುರಂತವೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದೇವಾಲಯವನ್ನು ಸುಪರ್ದಿಗೆ ಪಡೆದು, ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಗೆ ಆದೇಶಿಸಬೇಕು ಮತ್ತು ಚಂದ್ರವಳ್ಳಿ ಸ್ಮಾರಕಗಳನ್ನು ಭಾರತ ಪುರಾತತ್ವ ಇಲಾಖೆಯ ಸುಪರ್ದಿಗೆ ನೀಡಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ರಕ್ಷಿಸುವಂತೆ ಕೋರಬೇಕೆಂದು ಕನ್ನಡ ಗೆಳೆಯರ ಬಳಗವು ಮನವಿ ಮಾಡುತ್ತದೆ ಎಂದು ಪ್ರಕಟನೆುಲ್ಲಿ ತಿಳಿಸಲಾಗಿದೆ.







