ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಅನುಮಾನಾಸ್ಪದ ಸಾವು

ಬೆಂಗಳೂರು, ಜ.23: ಹೆರಿಗೆಗೆ ಕರೆತಂದಿದ್ದ ಗರ್ಭಿಣಿಯೊಬ್ಬರು ನಗರದ ಪೀಣ್ಯ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಲಗ್ಗೆರೆಯ ನಿವಾಸಿ ಅರ್ಪಿತಾ ಸಾವಿನ ಜೊತೆಗೆ ಮಗು ಕೂಡ ಹೊಟ್ಟೆಯಲ್ಲಿಯೇ ಮೃತಪಟ್ಟಿದೆ ಎನ್ನಲಾಗಿದೆ.
ಮನೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅರ್ಪಿತಾ ಅವರನ್ನು ಮಂಗಳವಾರ ರಾತ್ರಿ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವೇ ನಿಮಿಷಗಳಲ್ಲಿ ಅರ್ಪಿತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆತಂದ ಕೂಡಲೇ ವೈದ್ಯರು ಅರ್ಪಿತಾಗೆ ಡ್ರಿಪ್ಸ್ ಹಾಕಿದ್ದು, ಇದರ ಪರಿಣಾಮ ಉಸಿರಾಟದ ತೊಂದರೆಯಿಂದ ಅರ್ಪಿತಾ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಅರ್ಪಿತಾಗೆ ಡ್ರಿಪ್ಸ್ ಹಾಕುವ ವೇಳೆ ಯಾವುದೇ ಹಿರಿಯ ವೈದ್ಯರು ಇರಲಿಲ್ಲ. ತರಬೇತಿ ನಿರತ ವೈದ್ಯರ ಎಡವಟ್ಟಿನಿಂದ ಅರ್ಪಿತಾ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಅರ್ಪಿತಾ ಕುಟುಂಬದವರು ನೀಡಿದ ದೂರು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.





