ನ್ಯೂಯಾರ್ಕ್‌ನಲ್ಲಿ ಮೃತಪಟ್ಟ ಸೌದಿ ಸೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು
ವೈದ್ಯಕೀಯ ವೀಕ್ಷಕರ ವರದಿ
ನ್ಯೂಯಾರ್ಕ್, ಜ. 23: ಇತ್ತೀಚೆಗೆ ನ್ಯೂಯಾರ್ಕ್‌ನ ಹಡ್ಸನ್ ನದಿ ದಂಡೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಸೌದಿ ಅರೇಬಿಯದ ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ನಗರದ ವೈದ್ಯಕೀಯ ವೀಕ್ಷಕರು ಮಂಗಳವಾರ ಹೇಳಿದ್ದಾರೆ.
22 ವರ್ಷದ ರೊತಾನಾ ಫರಿಯಾ ಮತ್ತು ಅವರ 16 ವರ್ಷದ ಸೋದರಿ ತಾಲಾ ಅಕ್ಟೋಬರ್ ತಿಂಗಳ ಕೊನೆ ಭಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ದೇಹಗಳು ಜೊತೆಯಾಗಿ ಬಿಗಿಯಲ್ಪಟ್ಟಿದ್ದವು.
ಅವರನ್ನು ಕಾಲುಗಳು ಮತ್ತು ಸೊಂಟಗಳಲ್ಲಿ ಡಕ್ಟ್ ಟೇಪ್‌ನಿಂದ ಕಟ್ಟಿ ಹಾಕಲಾಗಿತ್ತು.
‘‘ಫರಿಯಾ ಸೋದರಿಯರ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂಬುದಾಗಿ ನನ್ನ ಕಚೇರಿ ತೀರ್ಮಾನಿಸಿದೆ. ಸೋದರಿಯರು ಹಡ್ಸನ್ ನದಿಗೆ ಇಳಿಯುವ ಮುನ್ನ ತಮ್ಮನ್ನು ಪರಸ್ಪರ ಕಟ್ಟಿಕೊಂಡಿದ್ದರು’’ ಎಂದು ಮುಖ್ಯ ವೈದ್ಯಕೀಯ ವೀಕ್ಷಕಿ ಬಾರ್ಬರಾ ಸ್ಯಾಂಪ್ಸನ್ ಹೇಳಿದರು.
ಈ ಸೋದರಿಯರು ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದರು ಎಂಬುದಾಗಿ ಅವರ ಸಾವಿನ ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿಲ್ಲ.
ಕುಟುಂಬದ ಮನೆಯಿಂದ ತಪ್ಪಿಸಿಕೊಂಡಿದ್ದರು
ಈ ಸೋದರಿಯರು ವರ್ಜೀನಿಯದಲ್ಲಿರುವ ತಮ್ಮ ಕುಟುಂಬದ ಮನೆಯಿಂದ ಹಲವು ಬಾರಿ ಓಡಿ ಹೋಗಿದ್ದರು. ಅವರು 2017ರ ಕೊನೆಯಿಂದ ಮನೆಯಲ್ಲಿ ವಾಸಿಸುತ್ತಿರಲಿಲ್ಲ.
ಅವರನ್ನು ಆಶ್ರಯ ಮನೆಯೊಂದರಲ್ಲಿ ಇರಿಸಲಾಗಿತ್ತು. ಆದರೆ, ಅವರು ಆಗಸ್ಟ್‌ನಲ್ಲಿ ವರ್ಜೀನಿಯ ತೊರೆದು ನ್ಯೂಯಾರ್ಕ್‌ಗೆ ತೆರಳಿದರು. ಅಲ್ಲಿ ಅವರು ವಿವಿಧ ದುಬಾರಿ ಹೊಟೇಲ್‌ಗಳಲ್ಲಿ ತಂಗಿದರು ಹಾಗೂ ತಮ್ಮ ಕ್ರೆಡಿಟ್ ಕಾರ್ಡ್‌ನ ಗರಿಷ್ಠ ಮಿತಿಯನ್ನು ತಲುಪಿದರು ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರರೋರ್ವರು ಹೇಳಿರುವುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಸೌದಿ ಅರೇಬಿಯಕ್ಕೆ ವಾಪಸಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದರು ಎಂದು ಅವು ಹೇಳಿವೆ.