ಜ.24, 25 ರಂದು ಹುಬ್ಬಳ್ಳಿಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಹುಬ್ಬಳ್ಳಿ,ಜ.23: ಸಂಸದ ಪ್ರಹ್ಲಾದ್ ಜೋಶಿ ಹಾಗೂ ಕ್ಷಮತಾ ಸಮಿತಿಯ ವತಿಯಿಂದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ-2019ನ್ನು ಜ.24 ಹಾಗೂ 25ರಂದು ನಗರದ ಆಕ್ಸ್ ಫರ್ಡ್ ಕಾಲೇಜು ಹತ್ತಿರದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ಷಮತಾ ಸಮಿತಿಯ ಸಂಚಾಲಕ ಗೋವಿಂದ ಜೋಶಿ ಅವರು ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ಪರ್ವ ಕಾಲದಲ್ಲಿ ನಡೆಯುವ ಪಾರಂಪರಿಕ ಆಟವಾಗಿದ್ದು, ಗಾಳಿಪಟ ಆಟವನ್ನು ನಮ್ಮ ದೇಶವಲ್ಲದೇ ವಿಶ್ವದ ಹಲವಾರು ದೇಶಗಳು ಗಾಳಿಪಟ ಮನರಂಜನೆಯನ್ನು ಆಸ್ವಾದಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಮೋಜು ಭರಿತ ಮನರಂಜನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, ಉತ್ಸವದಲ್ಲಿ 11 ದೇಶಗಳ 34 ಖ್ಯಾತ ಗಾಳಿಪಟ ಆಟಗಾರರು ತಮ್ಮ ವೈಶಿಷ್ಟ್ಯ ಪೂರ್ಣ ಬೃಹತ್ ಗಾಳಿಪಟ ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಸಾರ್ವಜನಿಕರನ್ನು ರಂಜಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲದೇ ಗಾಳಿಪಟ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಆಟಪಾಠ, ಚಿತ್ರಕಲಾ ಸ್ಪರ್ಧೆ ಹಾಗೂ ಸಂಜೆ ಮನರಂಜನೆ ಕಾರ್ಯಕ್ರಮ ನಡೆಯಲಿವೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಪ್ರಹ್ಲಾದ್ ಜೋಶಿ ಅವರು ನೆರವೇರಿಸಲಿದ್ದಾರೆ. 24 ರಂದು ಆಟಪಾಠ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಅಲ್ಲದೇ ಉತ್ಸವದಲ್ಲಿ ಸುಮಾರು 30 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅಹಾರ ಮಳಿಗೆ, ಆನ್ಲೈನ್ ಮತದಾರರ ನೋಂದಣಿ, ಉಜ್ವಲ ಗ್ಯಾಸ್ ಮಾಹಿತಿ ವಿವರಣೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೌಸಿ ಹಾಗೂ ಇನ್ನಿತರ ಮೋಜಿನ ಆಟಗಳ ಮಳಿಗೆ ಕೂಡ ಉತ್ಸವದಲ್ಲಿ ಇರಲಿವೆ ಎಂದರು. ಜ.24ರಂದು ಸಂಜೆ ರಾಷ್ಟ್ರೀಯ ಗೀತೆಗಳ ಡಿ.ಜೆ ಸೌಂಡ್ಸ್ ಮೂಲಕ ಮನರಂಜನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಜ.22, 23ರಂದು ನಡೆಯಬೇಕಾಗಿದ್ದ ಗಾಳಿಪಟ ಉತ್ಸವ ಸಿದ್ದಗಂಗಾ ಶ್ರೀಗಳ ನಿಧನದಿಂದಾಗಿ ಮುಂದೂಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಶಿವು ಮೆಣಸಿನಕಾಯಿ, ದಿನೇಶ ಪೈ, ಸಂತೋಷ ಚವ್ಹಾಣ್, ರಾಮದುರ್ಗ, ಮುರುಳಿಧರ ಸೇರಿದಂತೆ ಇತರರು ಇದ್ದರು.







