ಮೈಸೂರು: ವೇಷ ಧರಿಸಿ ಹಣ ವಸೂಲಿಗೆ ಯತ್ನಿಸಿದ 'ನಕಲಿ ಪೊಲೀಸ್' ಬಂಧನ

ಮೈಸೂರು,ಜ.23: ನಿಮ್ಮ ಮಗ ಲವ್ ಮಾಡುವ ನಾಟಕವಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿ ವ್ಯಕ್ತಿಯೋರ್ವರಿಂದ ಹಣ ವಸೂಲಿ ಮಾಡಲು ಯತ್ನಿಸಿದ ನಕಲಿ ಇಂಟೆಲಿಜೆನ್ಸ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಸಲಿ ಪೊಲೀಸರ ಖೆಡ್ಡಕ್ಕೆ ಬಿದ್ದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ವನಹಳ್ಳಿ ಗ್ರಾಮದ ಸಿದ್ದಪ್ಪ ಚನ್ನಬಸಪ್ಪ ನ್ಯಾಮಕ್ಕನವರ (27) ಪೊಲೀಸರ ಬಲೆಗೆ ಬಿದ್ದ ನಕಲಿ ಪೊಲೀಸ್. ಈತ ಮೈಸೂರಿನ ಶಕ್ತಿನಗರದಲ್ಲಿರುವ ನಾರಾಯಣಗೌಡ ಅವರ ಮನೆಗೆ ಬಂದು, ನಿಮ್ಮ ಮಗ ರೇಣುಕಾಗೌಡ ಬೆಂಗಳೂರಿನಲ್ಲಿ ಹುಡುಗಿಯನ್ನು ಲವ್ ಮಾಡುವ ಆಟವಾಡಿ ತಪ್ಪಿಸಿಕೊಂಡಿದ್ದಾನೆ. ಅವನನ್ನು ಬೇಗನೆ ಠಾಣೆಗೆ ಒಪ್ಪಿಸಿ ಎಂದು ಕೂಗಾಡಿದ್ದಾನೆ. ಇದರಿಂದ ಆತಂಕಗೊಂಡ ಮನೆಯವರು, ಆತನನ್ನು ಯಾರೆಂದು ಪ್ರಶ್ನಿಸಿದಾಗ, ಪೊಲೀಸ್ ಬಟ್ಟೆ ಹಾಕಿರುವುದು ಕಾಣಿಸುವುದಿಲ್ಲವೇ. ಮಗನ ಕೇಸ್ ಕ್ಲೋಸ್ ಮಾಡಲು ಈಗಲೇ 50 ಸಾವಿರ ರೂ.ಗಳನ್ನು ನೀಡಿ. ಇಲ್ಲವಾದರೆ ನಿಮ್ಮ ಮನೆಯವರನ್ನು ಎಳೆದುಕೊಂಡು ಹೋಗುತ್ತೇನೆ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.
ಇದರಿಂದ ಹೆದರಿದ ಮನೆಯವರು ಮನೆಯಲ್ಲಿದ್ದ 5 ಸಾವಿರ ರೂ. ನಗದನ್ನು ನೀಡಿ, ಉಳಿದ ಹಣವನ್ನು ಬ್ಯಾಂಕ್‍ನಿಂದ ತರುವುದಾಗಿ ತಿಳಿಸಿ, ಹೊರಗೆ ಬಂದಿದ್ದಾರೆ. ಬಳಿಕ ಆತನ ನಡವಳಿಕೆ ಬಗ್ಗೆ ಅನುಮಾನಗೊಂಡ ನಾರಾಯಣಗೌಡರು, ಉದಯಗಿರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡ ಉದಯಗಿರಿ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಮಫ್ತಿಯಲ್ಲಿ ನಾರಾಯಣಗೌಡರ ಮನೆಗೆ ಬಂದು ಪೊಲೀಸ್ ಡ್ರೆಸ್‍ನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ತಾನು ಇಂಟೆಲಿಜೆನ್ಸ್ ಸಬ್ ಇನ್ಸ್ ಪೆಕ್ಟರ್, ನಾರಾಯಣಗೌಡರ ಮಗ ರೇಣುಕಾಗೌಡರವರ ದೂರಿನ ವಿಚಾರಣೆಗೆ ಬಂದಿರುವುದಾಗಿ ಹೇಳಿದ್ದಾನೆ. ಆದರೆ ಆತನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಆತ ಅಸಲಿ ಅಲ್ಲ, ನಕಲಿ ಪೊಲೀಸ್ ಅಧಿಕಾರಿಯೆಂದು ಗೊತ್ತಾಗಿದೆ.
ಕೂಡಲೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಕೂಲಂಕಷವಾಗಿ ವಿಚಾರಣೆಗೆ ಮಾಡಿದ ಪೊಲೀಸರು, ಆತ ಅಡ್ಡದಾರಿ ಹಿಡಿದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಹಣಕ್ಕಾಗಿ ಮಾರುವೇಷ ಹಾಕಿದ ವ್ಯಕ್ತಿ ಕಂಬಿ ಹಿಂದೆ ಬಿದ್ದಿದ್ದಾನೆ. ಇನ್ನು ಈ ಕೃತ್ಯಕ್ಕೆ ಬಳಸಿದ್ದ ಮಾರುತಿ ಇಟಿಯೋಸ್ ಕಾರು ಹಾಗೂ 5 ಸಾವಿರ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.







