ಸ್ನೇಹಿತನ ಕೊಂದು, ದೇಹವನ್ನು 200 ತುಂಡು ಮಾಡಿ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ!
![ಸ್ನೇಹಿತನ ಕೊಂದು, ದೇಹವನ್ನು 200 ತುಂಡು ಮಾಡಿ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ! ಸ್ನೇಹಿತನ ಕೊಂದು, ದೇಹವನ್ನು 200 ತುಂಡು ಮಾಡಿ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ!](https://www.varthabharati.in/sites/default/files/images/articles/2019/01/24/174397.jpeg)
ಮುಂಬೈ, ಜ.24: ತನ್ನ ಸ್ನೇಹಿತನನ್ನು ಕೊಂದು, ಆತನ ದೇಹವನ್ನು 200 ತುಂಡುಗಳನ್ನಾಗಿ ಕೊಚ್ಚಿ ಹಾಕಿ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ ಆರೋಪದ ಮೇಲೆ 43 ವರ್ಷದ ಸಾಂತಾಕ್ರೂಝ್ ನಿವಾಸಿ ಪಿಂಟು ಶರ್ಮ ಎಂಬಾತನನ್ನು ಬಂಧಿಸಲಾಗಿದೆ.
ಮಾನವ ದೇಹದ ಚೂರುಗಳು ಒಳಚರಂಡಿ ಹೊಕ್ಕ ಪರಿಣಾಮ ಡ್ರೈನೇಜ್ ಬ್ಲಾಕ್ ಆದಾಗಲೇ ಹತ್ಯೆ ಘಟನೆ ಬೆಳಕಿಗೆ ಬಂದಿತ್ತು. ಮೃತ ವ್ಯಕ್ತಿಯನ್ನು 58 ವರ್ಷದ ಗಣೇಶ್ ಕೊಲ್ಹಡ್ಕರ್ ಎಂದು ಗುರುತಿಸಲಾಗಿದ್ದು. ಆತ ವಿರಾರ್ ಪ್ರದೇಶದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ.
ಗಣೇಶ್ ಸದ್ಯದಲ್ಲಿಯೇ ವಿವಾಹವಾಗಲಿದ್ದರಿಂದ ಪಿಂಟುವಿನಿಂದ ರೂ 1 ಲಕ್ಷ ಸಾಲ ಪಡೆದಿದ್ದನಾದರೂ ಅದರಲ್ಲಿ ರೂ 40,000 ವಾಪಸ್ ನೀಡಿದ್ದ.
ಡಿಸೆಂಬರ್ 16ರಂದು ಪಿಂಟು ನೇರ ಗಣೇಶ್ ನಿವಾಸಕ್ಕೆ ಬಂದು ಇಷ್ಟೊಂದು ವಯಸ್ಸಾದ ನಂತರ ವಿವಾಹವಾಗುತ್ತಿದ್ದೀರಾ ಎಂದು ತಮಾಷೆ ಮಾಡಿದ್ದೇ ಅಲ್ಲದೆ ಆತನ ಪತ್ನಿಯಾಗುವವಳು ವಿವಾಹದ ನಂತರ ವಿವಾಹೇತರ ಸಂಬಂಧ ಹೊಂದಬಹುದು ಎಂದು ಹೇಳಿದ್ದ.
ಇದರಿಂದ ಇಬ್ಬರ ನಡುವೆಯೂ ಜಗಳವಾಗಿ ಗಣೇಶನನ್ನು ಪಿಂಟು ಗೋಡೆಯತ್ತ ದೂಡಿದ್ದ, ಪರಿಣಾಮ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದ. ನಂತರ ಪಿಂಟು ಹೆಕ್ಸಾ ಬ್ಲೇಡ್ ತೆಗೆದುಕೊಂಡು ಬಂದು ಮುಂದಿನ ನಾಲ್ಕು ದಿನಗಳ ಕಾಲ ಗಣೇಶನ ಮೃತದೇಹವನ್ನು 200 ತುಂಡುಗಳಾಗಿ ಕೊಚ್ಚಿ ಸಣ್ಣ ತುಂಡುಗಳನ್ನು ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿ ಉಳಿದವುಗಳನ್ನು ಲೋಕಲ್ ರೈಲು ಹತ್ತಿ ಮನೆಗೆ ಹೋಗುವ ಸಮಯ ಹಾದಿಯಲ್ಲಿ ಎಸೆದಿದ್ದ.
ಆತ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದ ಎಲುಬುಗಳು ಹಾಗೂ ಮಾಂಸದ ತುಂಡುಗಳು ಡ್ರೈನೇಜ್ ಬ್ಲಾಕ್ ಮಾಡಿದ್ದವು. ಇದನ್ನು ಸರಿ ಪಡಿಸಲು ಕಾರ್ಮಿಕರನ್ನು ಕರೆತಂದಾಗ ಕೊಲೆ ಪ್ರಕರಣ ಹೊರಜಗತ್ತಿಗೆ ತಿಳಿದು ಬಂದಿತ್ತು.