ಜಾತಿ ನಿಂದನೆ ಮಾಡಿ ಮೊದಲೇ ಹಲ್ಲೆ ಮಾಡಿದ್ದರಿಂದ ನಾನು ಕೈ ಎತ್ತಿದೆ: ಶಾಸಕ ಕಂಪ್ಲಿ ಗಣೇಶ್
ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರು, ಜ. 24: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ‘ಆನಂದ್ ಸಿಂಗ್ ನನ್ನನ್ನು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಅವರೇ ಮೊದಲು ಹಲ್ಲೆ ಮಾಡಿದ್ದರಿಂದ ನಾನು ಅವರ ಮೇಲೆ ಹಲ್ಲೆ ಮಾಡಬೇಕಾಯಿತು’ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಈ ಸಂಬಂಧ ‘ಕಂಪ್ಲಿ ಕಾಂಗ್ರೆಸ್’ ಫೇಸ್‌ಬುಕ್ ಖಾತೆಯಲ್ಲಿ ಜ.19ರ ರಾತ್ರಿ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಘಟನೆಗಳ ಬಗ್ಗೆ ಬರೆದಿಕೊಂಡಿರುವ ಗಣೇಶ್, ಆನಂದ್ ಸಿಂಗ್ ಅವರಿಂದ ನನಗೆ ಜೀವ ಬೆದರಿಕೆ ಇದ್ದು, ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಹಲ್ಲೆ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾದ ಬಳಿಕ ತಲೆ ಮರೆಸಿಕೊಂಡಿದ್ದ ಕಂಪ್ಲಿ ಗಣೇಶ್, ‘ಆನಂದ್ ಸಿಂಗ್ ಅವರೇ ಮೊದಲು ನನ್ನ ಮೇಲೆ ಹಲ್ಲೆ ನಡೆಸಿದರು. ಇದರಿಂದ ಕುಪಿತನಾಗಿ ನಾನೂ ಅವರ ಮೇಲೆ ಕೈಎತ್ತ ಬೇಕಾಯಿತು. ಇದಕ್ಕೆ ಶಾಸಕ ಭೀಮಾನಾಯ್ಕ, ವಿಶ್ವ, ಶರಣಪ್ಪ ಸಾಕ್ಷಿಯಾಗಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
‘ರಾಜಕೀಯವಾಗಿ ನನ್ನನ್ನು ಮುಗಿಸಲು ಆನಂದ್ ಸಿಂಗ್ ಪ್ರಯತ್ನ ಮಾಡುತ್ತಿದ್ದು, ನನ್ನ ವಿರುದ್ಧ ಬರುತ್ತಿರುವ ಸುದ್ದಿಗಳೆಲ್ಲಾ ಶುದ್ಧ ಸುಳ್ಳು. ಕಂಪ್ಲಿ ಕ್ಷೇತ್ರದ ಜನ ಇಂತಹ ಸುದ್ದಿಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು. ಕಂಪ್ಲಿ ಕ್ಷೇತ್ರದ ಕಲ್ಯಾಣವೇ ನನ್ನ ಗುರಿ’ ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
‘ನನ್ನ ಎದುರು ಬೆಳೆದ ಹುಡುಗ ನೀನು, ನನ್ನ ಎದುರೇ ಕೂರುವ ಶಕ್ತಿ ಬಂತಾ ಮಗನೆ ಎಂದು ಎದೆಗೆ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಜಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಎದೆಗೆ ಒದ್ದಿದ್ದರಿಂದ ನೋವು ಬಂತು. ಇದರಿಂದ ನಿಧಾನವಾಗಿ ನಾನು ರೂಮಿಗೆ ಹೋದರೂ, ಬಿಡದೆ ಮತ್ತೆ ರೂಮಿಗೆ ಬಂದು ಆನಂದ್ ಸಿಂಗ್ ಪಾಟ್‌ನಿಂದ ಹಲ್ಲೆ ನಡೆಸಿದರು. ಎಲ್ಲರೆದುರೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
‘ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರೆದುರೂ ನನ್ನ ಬಗ್ಗೆ ಕೀಳಾಗಿ ಮಾತನಾಡ್ತಿಯಾ ಈ ವಿಷಯದ ಕುರಿತು ಬಹಿರಂಗವಾಗಿ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ, ನಿನ್ನ ಮತ್ತು ಶಾಸಕ ಭೀಮಾನಾಯ್ಕ ನಡುವೆ ಗಲಾಟೆಯಾದಾಗ ಮಧ್ಯೆಪ್ರವೇಶಿಸಿ ಜಗಳ ಬಿಡಿಸಿದ್ದೇ ನಾನು. ಈಗ ನನ್ನ ವಿರುದ್ಧ ತಿರುಗಿ ಬೀಳುತ್ತಿಯ ಎಂದು ಮತ್ತೆ ಹಲ್ಲೆ ನಡೆಸಿದರು.
ಅಲ್ಲದೆ, ನನ್ನ ಕುಟುಂಬ, ಪತ್ನಿ, ತಾಯಿ, ಅಕ್ಕನ ಮೇಲೆ ಕೆಟ್ಟದಾಗಿ ಮಾತನಾಡಿದರು. ಇದರಿಂದ ಸಹಿಸಿಕೊಳ್ಳದೆ ನಾನು ಕೈಎತ್ತುವ ಪರಿಸ್ಥಿತಿ ನಿರ್ಮಾಣವಾಯಿತು. ನನಗೆ ಆನಂದ್ ಸಿಂಗ್ ಅವರ ಮೇಲೆ ಕೈ ಎತ್ತುವ ಯಾವುದೇ ಉದ್ದೇಶ ಇರಲಿಲ್ಲ’ ಎಂದು ಕಂಪ್ಲಿ ಗಣೇಶ್ ಸ್ಪಷ್ಟಪಡಿಸಿದ್ದಾರೆ.
‘ಎಂ.ಪಿ.ರವೀಂದ್ರ ಅವರ ಜಾಗ ಪಡೆದು ಹಗರಿಬೊಮ್ಮನಹಳ್ಳಿಯಲ್ಲಿ ಕಚೇರಿ ತೆರೆದು ಭೀಮಾನಾಯ್ಕನನ್ನು ಸೋಲಿಸಲು ಪಣ ತೊಟ್ಟಿದ್ದೆ. ಆದರೆ, ಅದು ಆಗಲಿಲ್ಲ. ಕಂಪ್ಲಿಯಲ್ಲೂ ಕಚೇರಿ ತೆರೆದು ನಿನ್ನನ್ನು ಮುಗಿಸುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ನಿಂತಿದ್ದರೂ ಒಂದೇ ಒಂದು ಕೂದಲು ಕೀಳಲು ಆಗಲಿಲ್ಲ ಎಂದು ಅವಾಚ್ಯವಾಗಿ ನಿಂದಿಸಿದರು’ ಎಂದು ಉಲ್ಲೇಖಿಸಿದ್ದಾರೆ.
‘ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನರಿಗೆ ನನ್ನ ಮನವಿ. ಕಂಪ್ಲಿ ಕ್ಷೇತ್ರದ ಜನ ಸುಳ್ಳು ಸುದ್ದಿಗಳನ್ನು ನಂಬಬಾರದು. ನಾನು ಕಂಪ್ಲಿ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ ಕಂಪ್ಲಿ ಕಲ್ಯಾಣವೇ ನನ್ನ ಗುರಿ’ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.







