ಗರ್ಭಿಣಿಯನ್ನು ದಾಖಲಿಸಲು ನಿರಾಕರಿಸಿದ ಆಸ್ಪತ್ರೆ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಪಾಟ್ನಾ, ಜ.24: ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯನ್ನು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ ನಂತರ ಆಕೆ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.
ಈ ಘಟನೆ ಬುಧವಾರ ನಡೆದಿದೆಯೆನ್ನಲಾಗಿದ್ದು, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ಜಲೌನ್ ನಲ್ಲಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ ಅಲ್ಲಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು ಮೂರು ದಿನಗಳ ನಂತರ ಬರುವಂತೆ ಹೇಳಿದ್ದರು.
ಕೊನೆಗೆ ಮಹಿಳೆ ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು ಅಲ್ಲಿದ್ದ ಇತರ ಮಹಿಳೆಯರು ಆಕೆಗೆ ಸಹಾಯ ಮಾಡಿದ್ದರು. ಆಸ್ಪತ್ರೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮಹಿಳೆಯ ಕುಟುಂಬ ನಂತರ ಪ್ರತಿಭಟನೆ ನಡೆಸಿದೆ.
ಇದೊಂದು ಗಂಭೀರ ವಿಚಾರ, ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು, ವೈದ್ಯರು ಮತ್ತು ಸಿಬ್ಬಂದಿ ತಪ್ಪಿತಸ್ಥರೆಂದು ತಿಳಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಲೌನ್ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ.