ಮಧ್ಯ ಪ್ರದೇಶ: 23,815 ರೂ. ಬದಲಿಗೆ ರೈತನ 13 ರೂ. ಸಾಲಮನ್ನಾ!

ಭೋಪಾಲ್, ಜ.24: ಮಧ್ಯ ಪ್ರದೇಶದ ರೈತ ಶಿವಲಾಲ್ ಕಠಾರಿಯಾ ಎಂಬವರ 23,815 ರೂ. ಸಾಲ ಮನ್ನಾಗೊಳಿಸಬೇಕಿತ್ತು ಆದರೆ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರಿನ ಎದುರು ಕೇವಲ 13 ರೂ!.
“ರಾಜ್ಯ ಸರಕಾರ ರೂ 2 ಲಕ್ಷವರೆಗಿನ ಸಾಲ ಮನ್ನಾಗೊಳಿಸುವುದಾಗಿ ತಿಳಿಸಿತ್ತು. ನಾನು ಕೂಡ ನನ್ನ ಸಾಲ ಮನ್ನಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದೆ, ಆದರೆ ಪಟ್ಟಿಯಲ್ಲಿರುವಂತೆ ಕೇವಲ ರೂ 13 ಸಾಲ ಮನ್ನಾಗೊಳಿಸಲಾಗಿದೆ'' ಎಂದು ಕಠಾರಿಯಾ ಅಲವತ್ತುಕೊಂಡಿದ್ದಾರೆ.
ಅಗರ್ ಮಲ್ವಾ ಜಿಲ್ಲೆಯ ನಿಪಾನಿಯಾ ಬೈಜನಾಥ್ ಗ್ರಾಮದ ನಿವಾಸಿಯಾಗಿರುವ ಕಠಾರಿಯಾ ಇತರ ರೈತರಂತೆಯೇ ಮಧ್ಯ ಪ್ರದೇಶದ ನೂತನ ಕಾಂಗ್ರೆಸ್ ಸರಕಾರ ಸಾಲಮನ್ನಾ ಘೋಷಣೆ ಮಾಡಿದಾಗ ಖುಷಿ ಪಟ್ಟಿದ್ದರು.
``ನಾನೊಬ್ಬ ಪ್ರಾಮಾಣಿಕ ರೈತ. ನನ್ನ ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸುತ್ತಿದ್ದೇನೆ. ಇಲಾಖೆಯ ಸಿಬ್ಬಂದಿಗಳಲ್ಲಿ ಪ್ರಶ್ನಿಸಿದಾಗ ಸಾಲ ಮನ್ನಾ ಘೋಷಿಸಿದ ದಿನ ನನ್ನ ಹೆಸರಿನಲ್ಲಿ ಸಾಲವಿರಲಿಲ್ಲ ಎಂದು ಹೇಳಿದ್ದಾರೆ. ಈ ಸಾಲ ಮನ್ನಾ ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ನನ್ನ ಪ್ರಕರಣವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ'' ಎಂದು ಅವರು ಹೇಳಿದ್ದಾರೆ.
ಸಾಲ ಮಂಜೂರಾತಿ ಸಂದರ್ಭ ನಡೆದಿರಬಹುದಾದ ಅವ್ಯವಹಾರಗಳಿಂದಾಗಿ ಸಾಲ ಮನ್ನಾ ವೇಳೆ ಹಲವಾರು ಸಮಸ್ಯೆಗಳು ಏರ್ಪಟ್ಟಿವೆ ಎಂದು ಸರಕಾರ ಹೇಳಿಕೊಂಡಿದೆ.







