ಮಾಧ್ಯಮಗಳು ಭಯೋತ್ಪಾದಕರಿಗಿಂತ ಅಪಾಯಕಾರಿ: ವಿವಾದ ಸೃಷ್ಟಿಸಿದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಂಗಳೂರು, ಜ. 24: ‘ಟಿಆರ್‌ಪಿ ಮತ್ತು ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ಸತ್ಯದ ಸುದ್ದಿಗಳಿಗಿಂತ ಅರ್ಧಸತ್ಯದ ಸುದ್ದಿಗಳ ಪ್ರಚಾರ ಸಲ್ಲ. ಪತ್ರಕರ್ತರು ಸತ್ಯದ ಸುದ್ದಿಗಳಿಗೆ ಆದ್ಯತೆ ನೀಡಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ಮಾಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಅನನ್ಯ ಕ್ರಿಯೇಷನ್ಸ್ ಆಶ್ರಯದಲ್ಲಿ ಏರ್ಪಡಿಸಿದ್ದ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸತ್ಯ ಮತ್ತು ಅರ್ಧ ಸತ್ಯದ ಸುದ್ದಿ ಬಿತ್ತರ ಮಾಡುವುದರಿಂದ ಮಾಧ್ಯಮಗಳ ಮೇಲಿನ ವಿಶ್ವಾಸವನ್ನು ಜನರ ಕಳೆದುಕೊಳ್ಳುತ್ತಾರೆಂದು ಎಚ್ಚರಿಸಿದರು.
ಅಪಾಯಕಾರಿ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಭಯೋತ್ಪಾದಕರಿಗಿಂತ ಅಪಾಯಕಾರಿಯಾಗಿವೆ. ಭಯೋತ್ಪಾದಕರು ಒಂದೇ ಗುಂಡಿಗೆ ಸಾಯಿಸುತ್ತಾರೆ. ಆದರೆ, ಮಾಧ್ಯಮಗಳು ನಿತ್ಯ ಕಾಟ ಕೊಟ್ಟು ಸಾಯಿಸುವ ಕೆಲಸ ಮಾಡುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಹಳದಿ(ಪೀತ) ಪತ್ರಿಕೋದ್ಯಮ ಹೆಚ್ಚಾಗಿದ್ದು, ಇದರಿಂದ ಸಮಾಜಕ್ಕೆ ತಪ್ಪು ಸಂದೇಶಗಳು ಹೋಗುತ್ತವೆ. ಇತ್ತೀಚೆಗೆ ತಮಗೂ ಇದರ ಅನುಭವ ಆಗಿದೆ ಎಂದ ಅವರು, ದೃಶ್ಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಅವರಿಗೆ ಬೇಕಾದ ಸುದ್ದಿಯನ್ನಷ್ಟೇ ಪ್ರಸಾರ ಮಾಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಕರ್ತರು ಯಾವುದೇ ಒಂದು ಸುದ್ದಿಯನ್ನು ಖಚಿತ ಮಾಹಿತಿ ಪಡೆದುಕೊಂಡ ನಂತರವೇ ಸುದ್ದಿಯನ್ನು ಮಾಡುವುದು ಒಳ್ಳೆಯದು. ಜತೆಗೆ ವಿವೇಚನೆ ಅಗತ್ಯ. ವಿವೇಚನೆಯಿಂದ ಸುದ್ದಿ ಮಾಡಿದರೆ ಮಾಧ್ಯಮಗಳು ತನ್ನ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಎಸ್ಸಿ-ಎಸ್ಟಿ ವರ್ಗದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿರುದ್ಯೋಗಿಗಳ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಿದೆ. ಇದರಿಂದ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲು ಪರಿಶಿಷ್ಟರಿಗೆ ಅನುಕೂಲವಾಗಲಿದೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ, ನಿಗಮದ ವಿಶೇಷ ಕಾರ್ಯಕ್ರಮದಡಿಯಲ್ಲಿ ಪರಿಶಿಷ್ಟರಿಗೆ ಮಾಧ್ಯಮ ತರಬೇತಿ ನೀಡಿದ್ದು ಮುಂದಿನ ವರ್ಷದಿಂದ ಇದನ್ನು ಹೆಚ್ಚಿನ ಜನರಿಗೆ ನೀಡಲು ಉದ್ದೇಶಿಸಲಾಗಿದೆ ಎಂದರು.
ಇದೇ ವೇಳೆ ಮಾಧ್ಯಮ ತರಬೇತಿ ಪಡೆದ 50ಕ್ಕೂ ಅಧಿಕ ಮಂದಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಇಲಾಖೆ ಕಾರ್ಯದರ್ಶಿ ಕುಮಾರ್ ನಾಯಕ್, ಸಲಹೆಗಾರ ವೆಂಕಟಯ್ಯ, ಪತ್ರಕರ್ತರಾದ ಗೌರೀಶ್ ಅಕ್ಕಿ, ಅವಿನಾಶ್, ರಾಘವ್‌ಸೂರ್ಯ, ದಿವ್ಯಶ್ರೀ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಲು, ಅನನ್ಯ ಕ್ರಿಯೇಷನ್‌ನ ರಾಜೇಶ್ ರಾಂಪುರ ಹಾಜರಿದ್ದರು.
‘ಪ್ರಜಾಪ್ರಭುತ್ವ ಉಳಿಯುವಿಕೆಗೆ ಮುಖ್ಯ ಕಾರಣವಾಗಿರುವ ಪತ್ರಿಕೋದ್ಯಮ ನಾಲ್ಕನೆ ಅಂಗವಾಗಿದ್ದು, ಅದು ಸತ್ಯದ ಪರವಾಗಿರಬೇಕೆಂಬುದಷ್ಟೇ ನನ್ನ ಮನವಿ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮಾಧ್ಯಮ ಸ್ನೇಹಿತರಿಗೆ ಬೇಸರ ಉಂಟುಮಾಡುವ ಉದ್ದೇಶ ನನ್ನ ಹೇಳಿಕೆಯದಲ್ಲ’
-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ







