ಅಸ್ಸಾಂ ಪೌರತ್ವ ನೋಂದಣಿ ಅಂತಿಮ ಗಡುವು ವಿಸ್ತರಿಸಲು ಸುಪ್ರೀಂ ನಕಾರ

ಹೊಸದಿಲ್ಲಿ,ಜ.24: ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ವರದಿಯನ್ನು 2019ರ ಜುಲೈ 31ರ ಗಡುವಿನ ಒಳಗೆ ಸಂಪೂರ್ಣಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಸೂಚಿಸಿದೆ.
ಲೋಕಸಭೆ ಚುನಾವಣೆ ಮತ್ತು ಎನ್‌ಆರ್‌ಸಿ ಪ್ರಕ್ರಿಯೆಯು ಅಭಾದಿತವಾಗಿರುವಂತೆ ನೋಡಿಕೊಳ್ಳಲು ಆದೇಶಿಸಿರುವ ಶ್ರೇಷ್ಠ ನ್ಯಾಯಾಲಯ ಈ ಬಗ್ಗೆ ಜೊತೆಯಾಗಿ ಕುಳಿತು ಯೋಜನೆ ರೂಪಿಸುವಂತೆ ಸಂಬಂಧಿತ ಇಲಾಖೆಗಳಿಗೆ ಸೂಚಿಸಿದೆ. ಈ ಎರಡೂ ಕಾರ್ಯಕ್ರಮಗಳನ್ನು ಯಾವ ರೀತಿ ಜೊತೆಯಾಗಿ ನಡೆಸಬಹುದು ಎಂಬ ಬಗ್ಗೆ ಸಭೆ ನಡೆಸುವಂತೆ ಅಸ್ಸಾಂ ಸರಕಾರದ ಮುಖ್ಯ ಕಾರ್ಯದರ್ಶಿ, ಚುನಾವಣಾ ಆಯೋಗದ ಕಾರ್ಯದರ್ಶಿ ಮತ್ತು ರಾಜ್ಯದ ಎನ್‌ಆರ್‌ಸಿ ಸಂಯೋಜಕರಿಗೆ ನ್ಯಾಯಾಲಯ ಸೂಚಿಸಿದೆ. ಈ ಸಭೆಯು ಏಳು ದಿನಗಳ ಒಳಗೆ ನಡೆಯಲಿದೆ ಎಂಬುದನ್ನು ಅಸ್ಸಾಂ ಪರ ಹಾಜರಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಖಾತರಿ ಪಡಿಸಿಕೊಳ್ಳಲಿದ್ದಾರೆ. ಅದರ ವರದಿಯನ್ನು ಫೆಬ್ರವರಿ 5ರಂದು ಅವರು ನ್ಯಾಯಪೀಠಕ್ಕೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ಆರ್.ಎಫ್ ನರಿಮನ್ ಅವರ ಪೀಠ ತಿಳಿಸಿದೆ.