ಜ.27ಕ್ಕೆ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಘಟಕೋತ್ಸವ
ಉಡುಪಿ, ಜ.24: ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ವತಿಯಿಂದ 1997ರಲ್ಲಿ ದಿ.ಅಲೆವೂರು ಪ್ರಭಾಕರ ಆಚಾರ್ಯರು ಉಡುಪಿ ಕೊಡಂಕೂರಿ ನಲ್ಲಿ ಸ್ಥಾಪಿಸಿದ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಘಟಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆ ಜ.27ರ ರವಿವಾರ ವಿದ್ಯಾಪೀಠದ ಆವರಣದಲ್ಲಿ ನಡೆಯಲಿದೆ ಎಂದು ವಿದ್ಯಾಪೀಠದ ರಿಜಿಸ್ಟ್ರಾರ್ ಬಿ.ಎ.ಆಚಾರ್ಯ ಮಣಿಪಾಲ ತಿಳಿಸಿದ್ದಾರೆ.
ಗುರುವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತ ಭಾಷೆಯ ಪುನರುತ್ಧಾನದ ಗುರಿಯೊಂದಿಗೆ ಇಲ್ಲಿ ‘ಸಂಸ್ಕೃತ ಹಾಗೂ ಸಾಂಪ್ರದಾಯಿಕ ಶಿಲ್ಪ ವಿಜ್ಞಾನ’ ಎಂಬ ಕೋರ್ಸನ್ನು ನಡೆಸಲಾಗುತ್ತಿದೆ. ಎಸ್ಸೆಸೆಲ್ಸಿ ತೇರ್ಗಡೆ ಗೊಂಡ ವಿಶ್ವಬ್ರಾಹ್ಮಣ ಸಮಾಜದ 10 ಮಂದಿ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಕೋರ್ಸ್‌ಗೆ ಸೇರಿಸಿಕೊಂಡು ಅವರಿಗೆ ಸಂಪೂರ್ಣ ಉಚಿತ ಊಟ, ಉಪ ಹಾರ, ವಸತಿ, ಪುಸ್ತಕ, ಸಮವಸ್ತ್ರ, ಔಷಧ ಹಾಗೂ ಶಿಕ್ಷಣವನ್ನು ನೀಡಲಾಗುತ್ತದೆ ಎಂದರು.
ವಿದ್ಯಾಪೀಠದಲ್ಲಿ ಮೊದಲ ಎರಡು ವರ್ಷ ಸಂಸ್ಕೃತ, ವೇದ, ಚಿತ್ರಕಲೆ, ಸಂಗೀತ, ಯೋಗ, ಜನಪದ ವೈದ್ಯ ಇವು ಅಧ್ಯಯನ ವಿಷಯ. ಮುಂದಿನ ಮೂರು ವರ್ಷಗಳಲ್ಲಿ ಸಂಸ್ಕೃತ, ವೇದ, ಆಗಮ, ಜ್ಯೋತಿಷ್ಯ, ಶಿಲ್ಪಶಾಸ್ತ್ರ ಹಾಗೂ ಸಮಾಜ ದರ್ಶನ ಅಧ್ಯಯನ ವಿಷಯಗಳಾಗಿರುತ್ತದೆ. ಇವರಿಗೆ ಸಂಸ್ಕೃತ ಕಾವ್ಯ ಪರೀಕ್ಷೆ ಹಾಗೂ ಸಂಸ್ಕೃತ ಸಾಹಿತ್ಯ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಬಿ.ವಿ.ಆಚಾರ್ಯ ತಿಳಿಸಿದರು.
ಇಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಕೃತ ವಿದ್ವತ್ ತರಗತಿಗೆ ಸೇರಬಹುದು. ಪುರೋಹಿತರು, ಅರ್ಚಕರಾಗಿಯೂ ಕಾರ್ಯನಿರ್ವಹಿಸಲು ಸಾಧ್ಯವಿದೆ. ಕೆಲವರು ಚಿತ್ರಕಲೆ, ಸಂಗೀತ, ಶಿಲ್ಪ, ಯೋಗಗಳಲ್ಲೂ ಜೀವನ ರೂಪಿಸಿಕೊಂಡಿದ್ದಾರೆ ಎಂದವರು ವಿವರಿಸಿದರು.
ಈವರೆಗೆ 200 ವಿದ್ಯಾರ್ಥಿಗಳು ವಿದ್ಯಾಪೀಠದಲ್ಲಿ ಪ್ರವೇಶ ಪಡೆದಿದ್ದಾರೆ. ಇವರಲ್ಲಿ 80ರಷ್ಟು ಮಂದಿ ಐದು ವರ್ಷಗಳ ಅಧ್ಯಯನ ಮುಗಿಸಿದ್ದಾರೆ. 60 ಮಂದಿ ಸಂಸ್ಕೃತ, ಕಾವ್ಯ, ಸಾಹಿತ್ಯ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆ. ಇದೀಗ ಮೊದಲ ಬಾರಿ ಶಾಲೆಯ ಘಟಿಕೋತ್ಸವವನ್ನು ಜ.27ರಂದು ಆಯೋಜಿಸಲಾಗುತ್ತಿದೆ ಎಂದರು.
ಹಾಸನ ಜಿಲ್ಲೆ ಅರಕಲುಗೂಡಿನ ಅರೆಮಾದನ ಹಳ್ಳಿಯ ವಿಶ್ವಬ್ರಾಹ್ಮಣ ಜಗದ್ಗುರು ಪೀಠದ ಶ್ರೀಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳು ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಆಶೀರ್ವಚನ ನೀಡಲಿದ್ದಾರೆ. ವಿದ್ಯಾಪೀಠದ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಲೆವೂರು ಪ್ರಭಾಕರ ಆಚಾರ್ಯ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷೆ ಶಶಿಕಲಾ ಪಿ.ಆಚಾರ್ಯ, ವಿದ್ಯಾಪೀಠದ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಪ್ರಾಂಶುಪಾಲ ಶ್ರೀಧರ ಭಟ್, ಸದಸ್ಯ ಮೋಹನ ಎಂ.ಪಿ. ಉಪಸ್ಥಿತರಿದ್ದರು.







