ವಾಮದಪದವು: ಉದ್ಯೋಗ ಕೌಶಲ್ಯ ಮಾರ್ಗದರ್ಶನ ಕಾರ್ಯಕ್ರಮ

ಬಂಟ್ವಾಳ, ಜ. 24: ಆಂತರಿಕ ಗುಣಮಟ್ಟ ಭರವಸಾ ಕೋಶ, ವೃತ್ತಿ ಮಾರ್ಗದರ್ಶನ ಕೋಶ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಸಂಘ ಇವುಗಳ ಆಶ್ರಯದಲ್ಲಿ ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯ ಮತ್ತು ವೃತ್ತಿ ಮಾರ್ಗದರ್ಶನ ಕುರಿತ ಒಂದು ದಿನದ ಕಾರ್ಯಗಾರ ನಡೆಯಿತು.
ವರ್ಕ್‍ಫೋರ್ಸ್ ಡೆವಲಪ್‍ಮೆಂಟ್ ಸೆಂಟರ್, ಅವೇಕ್ ಇಂಡಿಯಾ ಫೌಂಡೇಷನ್ ಬೆಂಗಳೂರು ಇದರ ಗುರುರಾಜ್. ಎಂ.ಕೆ, ನಿತಿನ್ ಮಿರಾಜ್‍ಕರ್ ಹಾಗೂ ಅಜ್ಗರ್ ಪಾಷ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಬದಲಾಗುತ್ತಿರುವ ಉದ್ಯೋಗದ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಾಮಥ್ರ್ಯ ಹಾಗೂ ಕೌಶಲ್ಯ ವನ್ನು ಬೆಳೆಸಿಕೊಳ್ಳುವ ಅನಿವಾರ್ಯತೆಯಿದ್ದು, ಸಾಮಾನ್ಯ ಜ್ಞಾನ, ಸಂಹವನ ಕೌಶಲ್ಯ ಇವುಗಳನ್ನು ವೃದ್ಧಿಸುವ ಬಗೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ರೀತಿ, ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಸಂದರ್ಶನ ಎದುರಿಸುವಿಕೆ ಈ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಚಂದ್ರಕಾಂತ ಶೆಣೈ ಸ್ವಾಗತಿಸಿ, ಡಾ. ರವಿ ಎಂ.ಎನ್. ವಂದಿಸಿ, ಪ್ರೊ. ಅಶೋಕ ಕುಮಾರ್ ಬಿ. ನಿರೂಪಿಸಿದರು.





