ಮಹಾಮೈತ್ರಿಯಿಂದ ಮೋದಿಯನ್ನು ರಕ್ಷಿಸಲು ಪಳನಿಸ್ವಾಮಿ, ಜಗನ್ ಗೂ ಅಸಾಧ್ಯ: ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ
ಲೋಕಸಭಾ ಚುನಾವಣೆ

ಹೊಸದಿಲ್ಲಿ,ಜ.24: 2019ರ ಲೋಕಸಭಾ ಚುನಾವಣೆಗಾಗಿ ಮೂವರು ಪ್ರಬಲ ಮಹಿಳೆಯರಾದ ಮಮತಾ ಬ್ಯಾನರ್ಜಿ,ಮಾಯಾವತಿ ಮತ್ತು ಮೆಹಬೂಬ ಮುಫ್ತಿ ಅವರು ಅಖಿಲೇಶ್ ಯಾದವf ಜೊತೆ ಯುಪಿಎ ಸೇರಿದರೆ ಈ ಮಹಾ ಮೈತ್ರಿಕೂಟವು ಕೇಂದ್ರದಲ್ಲಿ ಮುಂದಿನ ಸರಕಾರವನ್ನು ರಚಿಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್ ನಡೆಸಿರುವ ‘ಮೂಡ್ ಆಫ್ ದಿ ನೇಷನ್’ ಜನಾಭಿಪ್ರಾಯ ಸಂಗ್ರಹದ ಫಲಿತಾಂಶಗಳು ಬೆಟ್ಟು ಮಾಡಿವೆ.
ಪಳನಿಸ್ವಾಮಿಯವರ ಎಐಎಡಿಎಂಕೆ ಮತ್ತು ಜಗನ್ ರೆಡ್ಡಿಯವರ ವೈಎಸ್‌ಆರ್‌ಸಿಪಿ ಮೋದಿ ನೇತೃತ್ವದ ಎನ್ ಡಿಎಗೆ ಸೇರಿದರೂ ಕೇವಲ 234 ಸ್ಥಾನಗಳನ್ನಷ್ಟೇ ಗೆಲ್ಲಲು ಅದಕ್ಕೆ ಸಾಧ್ಯವಾಗಲಿದೆ. ಇದು ಸರಳ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಗಿಂತ ತುಂಬ ಕಡಿಮೆಯಾಗುತ್ತದೆ ಎಂದು ರಾಷ್ಟ್ರವ್ಯಾಪಿ ನಡೆಸಲಾದ ಸಮೀಕ್ಷೆಯು ಹೇಳಿದೆ. ಈಗ ಚುನಾವಣೆ ನಡೆದರೆ ಸಮೀಕ್ಷೆಯ ಫಲಿತಾಂಶಗಳು ಅನ್ವಯವಾಗುತ್ತವೆ ಎಂದು ಅದು ಹೇಳಿದೆ.
ಮಹಾ ಮೈತ್ರಿಕೂಟವು ಶೇ.44 ಮತಗಳಿಕೆಯೊಂದಿಗೆ ಬಹುಮತಕ್ಕೆ ಅಗತ್ಯವಾದ 272 ಸ್ಥಾನಗಳನ್ನು ಗಳಿಸಲಿದೆ. ಎನ್‌ಡಿಎ ಶೇ.40ರಷ್ಟು ಮತಗನ್ನು ಗಳಿಸಲಿದೆ ಎಂದು ಜನಾಭಿಪ್ರಾಯ ಸಂಗ್ರಹದಲ್ಲಿ ತಿಳಿದು ಬಂದಿದೆ.
ದೇಶಾದ್ಯಂತ ಒಟ್ಟು 13,179 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಮೂಡ್ ಆಫ್ ದಿ ನೇಷನ್ ಲೋಕಸಭಾ ಚುನಾವಣೆಗೆ ಮುನ್ನ ದೇಶದ ರಾಜಕೀಯ ನಾಡಿಮಿಡಿತವನ್ನು ಕಂಡುಕೊಳ್ಳಲು ನಡೆಸಲಾಗುವ ಜನಾಭಿಪ್ರಾಯ ಸಂಗ್ರಹವಾಗಿದೆ.
ಸಂಭಾವ್ಯ ನೂತನ ಮಿತ್ರಪಕ್ಷಗಳಾದ ಎಐಎಡಿಎಂಕೆ ಮತ್ತು ವೈಎಸ್‌ಆರ್‌ಸಿಪಿ ಬೆಂಬಲವಿದ್ದರೂ ಎನ್ ಡಿಎಗೆ ಕೇವಲ 234 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಬಹುದು ಎಂದು ಸಮೀಕ್ಷೆಯು ತಿಳಿಸಿದೆ. 2014ರ ಚುನಾವಣೆಯಲ್ಲಿ ಅದು 336 ಸ್ಥಾನಗಳನ್ನು ಗೆದ್ದಿತ್ತು. ಆ ಚುನಾವಣೆಯ ಬಳಿಕ ಅದು ಟಿಡಿಪಿ ಮತ್ತು ಆರ್‌ಎಲ್‌ಎಸ್‌ಪಿಯಂತಹ ತನ್ನ ಕೆಲವು ಮಿತ್ರಪಕ್ಷಗಳನ್ನು ಕಳೆದುಕೊಂಡಿದೆ.
ಇಂತಹ ಚಿತ್ರಣವಿದ್ದರೂ ಇತರ ಪಕ್ಷಗಳ ಮತ್ತು ಪಕ್ಷೇತರರ ಪಾಲಾಗುವ ಸಾಧ್ಯತೆಗಳಿರುವ 37 ಸ್ಥಾನಗಳಿಗಾಗಿ ಎನ್‌ಡಿಎ ಈಗಲೂ ದೃಷ್ಟಿ ಹಾಯಿಸಬಹುದಾಗಿದೆ. ಮಹಾಮೈತ್ರಿಯ ಅಂಗಪಕ್ಷಗಳು ಈವರೆಗೆ ತಾವು ಯುಪಿಎ ಜೊತೆಗೆ ಕೈಜೋಡಿಸಲಿದ್ದೇವೆಯೇ ಅಥವಾ ಪ್ರತ್ಯೇಕ ರಂಗವನ್ನು ರೂಪಿಸಲಾಗುವುದೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
ಲೋಕಸಭೆಯು 545 ಸದಸ್ಯ ಬಲವನ್ನು ಹೊಂದಿದ್ದು,ಸರಕಾರ ರಚನೆಗೆ ಕನಿಷ್ಠ 272 ಸ್ಥಾನಗಳು ಅಗತ್ಯವಾಗಿವೆ.







