ಮಕ್ಕಳು ಶ್ರೀಕೃಷ್ಣನಂತೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕು: ಉಡುಪಿ ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಶಿ

ಉಡುಪಿ, ಜ.24: ಮಕ್ಕಳು ಶ್ರೀಕೃಷ್ಣನ ಬಾಲಲೀಲೆಗನ್ನು ಅನುಸರಿಸುವುದರ ಜೊತೆಗೆ ಅವನು ಕಂಸನಂತಹ ದುಷ್ಟಶಕ್ತಿಗಳ ವಿರುದ್ದ ನಡೆಸಿದ ಹೋರಾಟ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಂ.ಜೋಶಿ ಹೇಳಿದ್ದಾರೆ.
ಗುರುವಾರ ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಉಡುಪಿಯ ಅಲಂಕಾರ್ ಚಲನಚಿತ್ರ ಮಂದಿರದಲ್ಲಿ, ಬಾಲ್ಯ ವಿವಾಹ ನಿಷೇಧ ಕುರಿತ ‘ಸಂದಿಗ್ಧ’ ಚಲನಚಿತ್ರದ ವಿಶೇಷ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳು ತಮ್ಮ ಬಾಲ್ಯದ ಆಟಗಳೊಂದಿಗೆ, ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಮೂಢನಂಬಿಕೆ ಮುಂತಾದವುಗಳ ವಿರುದ್ದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಶ್ರೀಕೃಷ್ಣ ತನ್ನ ಬಾಲ್ಯಾವಸ್ಥೆಯಲ್ಲಿ ಕಂಸನಂತಹ ಅಸುರ ಹಾಗೂ ಇತರೆ ದುಷ್ಠಶಕ್ತಿಗಳನ್ನು ಮೆಟ್ಟಿನಿಂತು ಹೋರಾಡಿದಂತಹ ಶಕ್ತಿ ಬೆಳಸಿಕೊಳ್ಳಬೆಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ, ದೇಶದಲ್ಲಿ ಹಲವು ಕಾನೂನುಗಳಿದ್ದರೂ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ ತಡೆಯಲು ಅಗುತ್ತಿಲ್ಲ. ಇವುಗಳ ಕುರಿತಂತೆ ಮಕ್ಕಳಿಗೆ ಜಾಗೃತಿ ಮೂಡಿಸಲು ‘ಸಂದಿಗ್ಧ’ ಚಲನಚಿತ್ರ ಪ್ರದರ್ಶನವನ್ನು ರಾಜ್ಯದ 15 ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಈವರೆಗೆ ಸುಮಾರು 2.5 ಲಕ್ಷಕ್ಕೂ ಅಧಿಕ ಮಕ್ಕಳು ಚಿತ್ರವನ್ನು ವೀಕ್ಷಿಸಿಸಿದ್ದಾರೆ. ಚಲನಚಿತ್ರವು ಮಕ್ಕಳ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸಲು ಪ್ರಬಲ ಅಸ್ತ್ರವಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣ ಕಡಿಮೆ ಇದೆ. ಆದರೆ ಜಿಲ್ಲೆಯಲ್ಲಿನ ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹ ಕಂಡುಬರುತ್ತಿದೆ ಎಂದ ವನಿತಾ ತೊರವಿ ತಿಳಿಸಿದರು.
ಉಡುಪಿ ಜಿಲ್ಲೆಯ 8 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದ್ದು, ಚಿತ್ರದಲ್ಲಿ ಶಿಕ್ಷಕರು, ವಿವಿಧ ಸರಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ. ಮಕ್ಕಳು ಚಿತ್ರ ವೀಕ್ಷಣೆಯ ಮೂಲಕ ಶಾಲಾ ದಿನದಿಂದಲೇ ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಹೊಂದಲು, ಹೋರಾಡಲು ಪ್ರೇರಣೆಯಾಗಲಿದೆ ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆ ವಹಿಸಿದ್ದರು. ಚಲನ ಚಿತ್ರದ ನಿರ್ದೇಶಕ ಮತ್ತು ನಟ ಸುಚೇಂದ್ರ ಪ್ರಸಾದ್, ನಟ ಮಹೇಶ್ ದೇವ್ರ, ಚಿತ್ರದ ಬಾಲನಟರಾದ ಸಂಜನಾ, ಕಿರಣ್, ನಿಶಾಂತ್, ಅಲಂಕಾರ್ ಚಿತ್ರಮಂದಿರದ ಮಾಲೀಕ ಜಗದೀಶ್ ಕುಡ್ವ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಶಿಶು ಅಭಿವೃಧ್ದಿ ಯೋಜನಾಧಿಕಾರಿ ಶೋಭಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್‌ಆಚಾರ್ ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ವಂದಿಸಿ ಪ್ರಶಾಂತ್ ಹಾವಂಜೆ ನಿರೂಪಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ವಂದಿಸಿ ಪ್ರಶಾಂತ್ ಹಾವಂಜೆ ನಿರೂಪಿಸಿದರು.







