ಪೊಲೀಸ್ ಪೇದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಆರೋಪಿಗಳ ವಿರುದ್ಧ ವಂಚನೆ ಆರೋಪ
ಬೆಂಗಳೂರು, ಜ.24: ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಂಧನದಲ್ಲಿರುವ ಆರೋಪಿಗಳ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ಆರೋಪಿಗಳಾದ ಹೋಳಿಯಪ್ಪ, ಬಸವರಾಜ್ ಹಾಗೂ ಶಿವಕುಮಾರ್ ವಿವಿಧ ಇಲಾಖೆಗಳಿಗೆ ಸರಕಾರ ನಡೆಸುವ ಪರೀಕ್ಷೆಗಳಲ್ಲಿ ಆಯ್ಕೆಯಾದ ಆಭ್ಯರ್ಥಿಗಳನ್ನು ಗುರಿ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಆರೋಪಿಗಳು ಅರಣ್ಯ ಇಲಾಖೆಯಲ್ಲಿ ಅಥವಾ ಯಾವುದಾದರೂ ಸರಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಚೈತ್ರಾ ಎಂಬುವರಿಂದ 10 ಲಕ್ಷ ನಗದು ಹಾಗೂ ಶೈಕ್ಷಣಿಕ ಪ್ರಮಾಣ ಪತ್ರ ತೆಗೆದುಕೊಂಡು ವಂಚನೆ ಮಾಡಿದ್ದಾರೆಂದು ಆರೋಪಿಸಿ ಚೈತ್ರಾ ಅವರ ಪತಿ ಮುರಳಿ ಎಂಬುವರು ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಚೈತ್ರಾ ಅರಣ್ಯ ಇಲಾಖೆಯ ಆರ್‌ಎಫ್‌ಒ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಈ ವಿಷಯ ತಿಳಿದು ಆರೋಪಿಗಳು ಚೈತ್ರಾ ಅವರ ಮನೆಗೆ ಹೋಗಿದ್ದರು. ಮುಂದಿನ ಹಂತದ ಸುತ್ತನ್ನು ಪಾಸು ಮಾಡಿಸುವುದಾಗಿ ಹೇಳಿ ನಂಬಿಸಿದ್ದಾರೆ. ಆರ್‌ಎಫ್‌ಒ ಹುದ್ದೆ ಸಿಗದಿದ್ದರೆ ಬೇರೆ ಯಾವುದಾದರೂ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ಇದಕ್ಕೆ 20 ಲಕ್ಷ ಹಣವನ್ನು ನಿಗದಿಪಡಿಸಿದ್ದರು ಎನ್ನಲಾಗಿದೆ.
ಅದರಂತೆ ಕಳೆದ ಅಕ್ಟೋಬರ್‌ನಲ್ಲಿ ಮುಂಗಡವಾಗಿ 10 ಲಕ್ಷ ಹಣ ಜೊತೆಗೆ ಅಭ್ಯರ್ಥಿಯ ಎಸೆಸ್ಸೆಲ್ಸಿ ಅಂಕಪಟ್ಟಿ ಸೇರಿದಂತೆ ಕೆಲಸಕ್ಕೆ ಬೇಕಾದ ಅಗತ್ಯ ಅಸಲು ದಾಖಲಾತಿ ಪತ್ರಗಳನ್ನು ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.







