ಮಲ್ಪೆ ಬೋಟು ನಾಪತ್ತೆ ಪ್ರಕರಣ: ಇನ್ನು ದಿನಗಳ ಕಾಲಾವಕಾಶ ನೀಡಿ- ಸಚಿವೆ ಜಯಮಾಲ

ಉಡುಪಿ, ಜ.24: ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರೊಂದಿಗೆ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನ ಪತ್ತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ತಾರ್ಕಿಕ ಅಂತ್ಯದತ್ತ ಬಂದಿದೆ. ಇನ್ನು ಎರಡು ದಿನಗಳ ಕಾಲಾವಕಾಶ ನೀಡಿ ಈ ಬಗ್ಗೆ ನಾನು ಮಾಹಿತಿ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.
ಇಂದು ಉಡುಪಿಗೆ ಆಗಮಿಸಿದ ಸಚಿವೆ, ನಗರದೊಳಗೆ ವಿವಿಧ ಕಾಮಗಾರಿಗಳ ಉದ್ಘಾಟನೆಯ ವೇಳೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ನಾಪತ್ತೆಯಾದ ಬೋಟಿನ ಕುರಿತಂತೆ ಕೇಂದ್ರ ಸರಕಾರ, ನೌಕಾಪಡೆ, ಮಹಾರಾಷ್ಟ್ರ, ಗೋವಾ ರಾಜ್ಯದೊಂದಿಗೆ ಸಮನ್ವಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದೀಗ ತಾರ್ಕಿಕ ಅಂತ್ಯದತ್ತ ಬರುತ್ತಿದೆ. ನನಗೆ ಇನ್ನೆರಡು ದಿನಗಳ ಕಾಲಾವಾಶ ನೀಡಿ ಎಂದು ಮನವಿ ಮಾಡಿದರು.
ಶಾಸಕರಾದ ಆನಂದ್‌ಸಿಂಗ್ ಮತ್ತು ಗಣೇಶ್ ಅವರ ಹೊಯ್‌ಕೈ ಕುರಿತು ಪ್ರಶ್ನಿಸಿದಾಗ, ಇದು ಬಳ್ಳಾರಿ ಶಾಸಕರಿಬ್ಬರ ವೈಯಕ್ತಿಕ ಜಗಳ, ಯಾರೇ ಹೊಡೆದಾಡಿಕೊಂಡರೂ ನಾವು ಸಪೋರ್ಟ್ ಮಾಡಲ್ಲ. ಶಾಸಕರು ಹೊಡೆದಾಡಿ ಕೊಂಡರೆ ಪಾರ್ಟಿ ಏನು ವಾಡಕ್ಕಾಗುತ್ತೆ ಎಂದು ಪ್ರಶ್ನಿಸಿದರು. ಇದರಿಂದ ಕಾಂಗ್ರೆಸ್ ಪಕ್ಷದ ಇಮೇಜ್‌ಗೆ ಏನೂ ದಕ್ಕೆಯಾಗೊಲ್ಲ. ಯಾರೆ ಬೇರೆ ಪಕ್ಷದವರೂ ಹೊಡ್ದಾಡ್‌ಕೊಳ್ಳಲ್ವಾ ಎಂದರು. ನಾನು ಆನಂದ್ ಸಿಂಗ್‌ರನ್ನು ನೋಡಲು ಹೋಗಿಲ್ಲ. ಆದರೆ ಅವರು ಚೆನ್ನಾಗಿದ್ದಾರೆ. ಪ್ರಕರಣದ ತನಿಖೆ ಆಗುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವೆ ವಿರುದ್ಧ ಶಾಸಕರು ಗರಂ: ಜಯಮಾಲರ ಉಪಸ್ಥಿತಿಯಲ್ಲಿ ಇಂದು ನಡೆದ ನಗರೋತ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡದ ಕುರಿತಂತೆ ಶಾಸಕ ಕೆ.ರಘುಪತಿ ಭಟ್ ಅವರು ಇಂದು ಸಚಿವೆ ಜಯಮಾಲ ಅವರ ವಿರುದ್ಧ ಗರಂ ಆದರು.
ಸಚಿವೆಯ ಆಹ್ವಾನದಂತೆ ಕಕ್ಕುಂಜೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾದ ರಘುಪತಿ ಭಟ್, ಕಾರ್ಯಕ್ರಮಕ್ಕೆ ಅಧಿಕಾರಿಗಳು ತಮಗೆ ಆಹ್ವಾನ ನೀಡದ ಕುರಿತಂತೆ ಜಯಮಾಲರನ್ನು ತರಾಟೆಗೆ ತೆಗೆದುಕೊಂಡರು. ನಗರೋತ್ಥಾನ ಕಾಮಗಾರಿ ಉದ್ಘಾಟನೆಗೆ ತಮಗೆ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಗರಂ ಆದರು.
ಇದೇನು ಕಾಂಗ್ರೆಸ್ ಕಾರ್ಯಕ್ರಮವೊ, ಸರಕಾರಿ ಕಾರ್ಯಕ್ರಮವೊ. ನದರದೆಲ್ಲೆಡೆ ಮಾಜಿ ಸಚಿವ ಪ್ರಮೋದ ಮದ್ವರಾಜ್ ಹೆಸರಿನ ಬ್ಯಾನರ್ ಹಾರಾಡುತ್ತಿದೆ ಎಂದರು. ಕೊನೆಗೆ ಶಾಸಕರ ಮನವೊಲಿಸಿದ ಜಯಮಾಲ ಅವರ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.







