ಪರಂಪರೆಯ ಬಹುತ್ವದ ಆಯಾಮಗಳು ಮುನ್ನೆಲೆಗೆ ಬರಲಿ: ಸಂಸ್ಕೃತಿ ಚಿಂತಕ ರಾಜೇಂದ್ರ ಜೆನ್ನಿ
ಬೆಂಗಳೂರು, ಜ.24: ಚುನಾವಣಾ ರಾಜಕಾರಣವನ್ನು ಮಾತ್ರ ಕೇಂದ್ರೀಕರಿಸದೆ, ನಮ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿದ್ದ ಸಾಂಸ್ಕೃತಿಕ, ಬಹುತ್ವದ ಆಯಾಮಗಳನ್ನು ಪುನಃ ಮುನ್ನೆಲೆಗೆ ತರುವಂತಹ ಕೆಲಸವಾಗಬೇಕಿದೆ ಎಂದು ಸಂಸ್ಕೃತಿ ಚಿಂತಕ ರಾಜೇಂದ್ರ ಜೆನ್ನಿ ಅಭಿಪ್ರಾಯಿಸಿದ್ದಾರೆ. ಗುರುವಾರ ಸಂತ ಜೋಸೆಫರ ವಾಣಿಜ್ಯ ಕಾಲೇಜು ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ವಾರ್ಷಿಕ ಉಪನ್ಯಾಸದ ಮಾಲಿಕೆಯಾಗಿ ಪ್ರಜಾಪ್ರಭುತ್ವ ಮತ್ತು ಉದಾರವಾದದಲ್ಲಿನ ಸದ್ಯದ ಬಿಕ್ಕಟ್ಟು ಕುರಿತು ಅವರು ಮಾತನಾಡಿದರು.
ಇವತ್ತು ಚುನಾವಣಾ ರಾಜಕಾರಣವು ಜಾತಿಯನ್ನು ಬಲಿಷ್ಟಗೊಳಿಸುತ್ತದೆ. ಜೊತೆಗೆ ಕಾರ್ಮಿಕ, ಮಹಿಳೆ, ದಲಿತ ಹಾಗೂ ಈ ದೇಶದ ಎಲ್ಲ ಬಡವರನ್ನು ನಿರ್ಲಕ್ಷಿಸುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇವಲ ಚುನಾವಣೆಯನ್ನಷ್ಟೆ ಕೇಂದ್ರಿಕರಿಸಿಕೊಂಡು ಕೂರದೆ, ಇದರ ಪರಿಹಾರಕ್ಕೆ ನಮ್ಮ ಪರಂಪರೆಯಲ್ಲಿದ್ದ ಸೌಹಾರ್ದತೆಯ ಬೇರುಗಳನ್ನು ಹುಡುಕಿ, ಅದನ್ನು ಪೋಷಿಸುವ ಕಡೆಗೂ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಉದಾರವಾದಿ, ಪ್ರಜಾಪ್ರಭುತ್ವ, ಬಹುತ್ವಗಳನ್ನು ಕೇವಲ ಪಾಶ್ಚತ್ಯ ದೃಷ್ಟಿಕೋನದಿಂದ ಮಾತ್ರ ನೋಡುವ ಅಗತ್ಯವಿಲ್ಲ. ಈ ಚಿಂತನೆಗಳು ಬೇರೆ, ಬೇರೆ ಸ್ವರೂಪಗಳಲ್ಲಿ ಭಾರತದಲ್ಲಿಯೆ ನೆಲೆಸಿದ್ದವು. ಅದನ್ನು ಇವತ್ತಿನ ವರ್ತಮಾನಕ್ಕೆ ಹೊಂದುವಂತೆ ಮರು ರೂಪಿಸಿಕೊಳ್ಳಬೇಕೆಂದು ಅವರು ಹೇಳಿದರು.





