ಫೆ.1 ರಿಂದ ಕಳರಿ ಪಯಟ್ಟು ಚಾಂಪಿಯನ್‌ಶಿಪ್
ಬೆಂಗಳೂರು, ಜ.24: ಭಾರತೀಯ ಕಳರಿಪಯಟ್ಟು ಫೌಂಡೇಷನ್ ವತಿಯಿಂದ ಫೆ.1 ರಿಂದ ಮೂರು ದಿನಗಳ ಕಾಲ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಕಳರಿಪಯಟ್ಟು ಚಾಂಪಿಯನ್‌ಶಿಪ್-2019 ಅನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫೌಂಡೇಷನ್‌ನ ಅಧ್ಯಕ್ಷ ಎಂ.ನ್ ಕೃಷ್ಣಮೂರ್ತಿ, ಕಳರಿಪಯಟ್ಟು ಸಾಂಪ್ರದಾಯಿಕ ಕಾದಾಟ ಪಂದ್ಯವಾಗಿದ್ದು, ಅತ್ಯಂತ ಉಪಯುಕ್ತ ಕಲೆಯಾಗಿದೆ. ವೈಯಕ್ತಿಕವಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬಹಳ ಉಪಯುಕ್ತವಾದ ಕಲೆ ಇದಾಗಿದೆ ಎಂದು ಹೇಳಿದರು.
ಪಂದ್ಯಾವಳಿಯು 6 ವಿಭಾಗದಲ್ಲಿ ನಡೆಯಲಿದ್ದು, ವಯೋಮಿತಿ ಮತ್ತು ದೇಹದಾರ್ಢ್ಯದ ಆಧಾರದ ಮೇಲೆ ಪ್ರತಿಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು. ಪಂದ್ಯಾವಳಿಗೆ 25 ರಾಜ್ಯಗಳಿಂದ ಸುಮಾರು 500 ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ. ಆರು ವರ್ಷದಿಂದ 50 ವರ್ಷದವರೂ ಈ ಸ್ವರ್ದೆಯಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ಚಾಂಪಿಯನ್‌ಶಿಪ್ ಅನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಮ್ ಖಾನ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಫೆ.2 ರಂದು ಕಳರಿಪಯಟ್ಟು ಬಗ್ಗೆ ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಸ್ವರ್ಧಾಳುಗಳಿಗೆ ಕಳರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಲಾಗುವುದು. ಫೆ.3 ರಂದು ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಪ್ರಥಮ ಬಹುಮಾನ ಚಿನ್ನದ ಪದಕ, ದ್ವಿತೀಯ ಬಹುಮಾನ ಬೆಳ್ಳಿ ಪದಕ, ತೃತೀಯ ಬಹುಮಾನ ತಾಮ್ರದ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತವೆ ಎಂದರು.







