ಮಕ್ಕಳಿಂದ ಹಲ್ಲೆ: ವೃದ್ಧೆ ತಾಯಿಂದು ಪುತ್ತೂರು ಎಸಿಗೆ ದೂರು
ಪುತ್ತೂರು, ಜ. 24: ತನ್ನಲ್ಲಿರುವ ಸ್ಥಿರಾಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಪೀಡಿಸುತ್ತಾ ತನ್ನಿಬ್ಬರು ಪುತ್ರರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪುತ್ರರಿಬ್ಬರ ಹಲ್ಲೆ-ದೌರ್ಜನ್ಯದಿಂದ ಕೈಮುರಿತಕ್ಕೊಳಗಾಗಿರುವ ಪುತ್ತೂರು ತಾಲೂಕಿನ ಬಲ್ಯ ಗ್ರಾಮದ ಕೊಲ್ಯದಕಟ್ಟ ನಿವಾಸಿಯಾದ 79 ವರ್ಷದ ವೃದ್ಧೆ ಮರಿಯಮ್ಮ ಎಂಬವರು ಪುತ್ತೂರು ಉಪವಿಭಾಗಾಧಿಕಾರಿಗೆ ಗುರುವಾರ ಸಂಜೆ ದೂರು ನೀಡಿದ್ದಾರೆ.
ಪುತ್ರರಾದ ಜೋರ್ಜ್ ಮತ್ತು ಸನ್ನಿ ಎಂಬವರ ವಿರುದ್ಧ ಅವರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದಾರೆ. ತಾನು ಪುತ್ರಿ ಚಿನ್ನಮ್ಮ ಹಾಗೂ ಪುತ್ರ ಸೈಮನ್ ಜತೆ ವಾಸ್ತವ್ಯವಿದ್ದು, ತನ್ನ ಹೆಸರಿಗೆ 1991-92ರಲ್ಲಿ ದರ್ಕಾಸ್ತು ಮಂಜೂರಾದ 2.90 ಎಕ್ರೆ ಸ್ಥಿರಾಸ್ತಿಯಿದೆ. ಕಳೆದ ಜ. 12ರಂದು ಸಂಜೆ ತಾನು ಮನೆಯ ಅಂಗಳದಲ್ಲಿ ಕರಿಮೆಣಸು ಒಣಗಿಸುತ್ತಿದ್ದ ವೇಳೆ,ತಾನು ಒಲೆ ಉರಿಸಲು ಶೇಖರಿಸಿಟ್ಟಿದ್ದ ಸೌದೆಗಳನ್ನು ತನ್ನ ಉಳಿದಿಬ್ಬರು ಪುತ್ರರಾದ ಜೋರ್ಜ್ ಮತ್ತು ಸನ್ನಿ ಕಡಿಯುತ್ತಿದ್ದರು. ಆಕ್ಷೇಪಿಸಿದ ವೇಳೆ ಅವರಿಬ್ಬರು ಕೊಲೆ ಮಾಡುವುದಾಗಿ ಬೆದರಿಸಿ, ದೊಣ್ಣೆಯಿಂದ ಕೈಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಅವರು ನಡೆಸಿದ ಹಲ್ಲೆಯಿಂದಾಗಿ ಕೈ ಮುರಿತಕ್ಕೊಳಗಾಗಿದ್ದು, ತನ್ನೊಂದಿಗೆ ವಾಸ್ತವ್ಯವಿರುವ ಪುತ್ರ ಸೈಮನ್ ತನ್ನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ಅವರು ನನ್ನ ಹಕ್ಕಿನ ಸ್ಥಿರಾಸ್ತಿಗೆ ಅಪಾರ ಹಾನಿ ಮಾಡಿದ್ದಾರೆ. ಮನೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ. ಇದರಿಂದಾಗಿ ನನಗೆ ಮನೆಗೆ ಹೋಗಲು ಹೆದರುವ ಸ್ಥಿತಿ ಬಂದಿದೆ ಎಂದು ದೂರಿನಲ್ಲಿ ತಿಳಿಸಿರುವ ಅವರು ಹಿರಿಯಳಾದ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.





