ತೆಲಂಗಾಣ ಉದ್ಯಮಿಯ ಪುತ್ರ ನಾಪತ್ತೆ ಪ್ರಕರಣ: ಮಡಿಕೇರಿಯಲ್ಲಿ ಕಾರು ಪತ್ತೆ- ಪ್ರಕರಣ ಇನ್ನೂ ನಿಗೂಢ

ಮಡಿಕೇರಿ, ಜ.24: ತೆಲಂಗಾಣ ಉದ್ಯಮಿಯೊಬ್ಬರ ಪುತ್ರ ನಾಪತ್ತೆಯಾಗಿರುವ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದ್ದು, ಆತನ ಕಾರು ಮಡಿಕೇರಿಯಲ್ಲಿ ಪತ್ತೆಯಾಗಿದೆ. ನಿಗೂಢ ಪ್ರಕರಣವನ್ನು ಭೇದಿಸಲು ನಗರಕ್ಕೆ ಆಗಮಿಸಿರುವ ತೆಲಂಗಾಣ ರಾಜ್ಯದ ಸರೂರ್ ನಗರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಮಡಿಕೇರಿ ಪೊಲೀಸರ ಸಹಕಾರ ಪಡೆದಿದ್ದಾರೆ.
ಗಣಿ ಉದ್ಯಮಿ ಮಾರುತಿ ಪ್ರಸಾದ್ ಅವರ ಪುತ್ರ ವಿನಯ್(28) ಎಂಬಾತ ಜ.18 ರಿಂದ ಕಾಣೆಯಾಗಿದ್ದಾನೆ ಎಂದು ಆತನ ಪೋಷಕರು ಸರೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರಿನ ಮಾಲಕನೂ ಆಗಿರುವ ವಿನಯ್ ಜ.17 ರಂದು ರಾತ್ರಿ ಮೊಬೈಲ್ ಮೂಲಕ ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಲ್ಲದೆ, ಬಳಿಕ ಸ್ನೇಹಿತರ ಜೊತೆಗೂಡಿ ಕೊಡಗು ಜಿಲ್ಲೆಗೂ ಪ್ರವಾಸ ತೆರಳುವುದಾಗಿ ಹೇಳಿದ್ದ ಎನ್ನಲಾಗಿದೆ.
ಪ್ರಸ್ತುತ ತೆಲಂಗಾಣ ರಾಜ್ಯಕ್ಕೆ ಸೇರಿರುವ ಸರೂರ್ ನಗರ ಹೈದರಾಬಾದ್‍ಗೆ ಸಮೀಪದಲ್ಲಿದ್ದು, ಅಲ್ಲಿನ ಗಣಿ ಉದ್ಯಮಿ ಮಾರುತಿ ಪ್ರಸಾದ್ ಅವರೊಂದಿಗೆ ಪುತ್ರ ವಿನಯ್ ಕೂಡ ವ್ಯವಹಾರ ನಡೆಸುತ್ತಿದ್ದಾನೆ. ತಾ.17 ರ ರಾತ್ರಿ 10 ಗಂಟೆ ಸುಮಾರಿಗೆ ತನ್ನ ತಾಯಿ ಹಾಗೂ ಕಿರಿಯ ಸಹೋದರ ವಿಶಾಲ್ ಬಳಿ ಮೊಬೈಲ್‍ನಲ್ಲಿ ಸಂಭಾಷಣೆ ನಡೆಸಿ, ತಾನು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕೊಡಗಿಗೂ ಪ್ರವಾಸ ತೆರಳುವುದಾಗಿ ತಿಳಿಸಿದ್ದಾನೆಂದು ಹೇಳಲಾಗಿದೆ. ಅದಾದ ಬಳಿಕ ಕೇವಲ 10 ನಿಮಿಷ ಅಂತರದಲ್ಲಿ ತಂದೆಯೊಂದಿಗೆ ಮಾತನಾಡಿ, ತಾನು ಹೈದರಾಬಾದ್‍ನಲ್ಲೇ ಇದ್ದು, 10 ನಿಮಿಷದಲ್ಲಿ ಮನೆಗೆ ಬರುವುದಾಗಿಯೂ ಹೇಳಿಕೊಂಡಿದ್ದು, ಪೋಷಕರಿಗೆ ಗೊಂದಲ ಮೂಡಲು ಕಾರಣವಾಗಿದೆ.
ತಾ.18 ರಂದು ಬೆಳಿಗ್ಗೆ 6 ಗಂಟೆಯಿಂದ ಪೋಷಕರು ವಿನಯ್‍ನನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ, ಆತನ ಮೊಬೈಲ್ ಸಂಪರ್ಕಕ್ಕೆ ಸಿಗದೆ ‘ಸ್ವಿಚ್ ಆಫ್’ ಎಂದು ಪ್ರತಿಕ್ರಿಯಿಸಿದೆ. ಇದರಿಂದಾಗಿ ಆತಂಕಗೊಂಡ ವಿನಯ್ ಪೋಷಕರು ಸರೂರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರು ಪತ್ತೆ
ನಗರದ ಸಿದ್ದಾಪುರ ರಸ್ತೆಯ ನಿವಾಸಿ ಬಿ. ಬಬ್ಬು ಗಣಪತಿ ಎಂಬವರು, ತಮ್ಮ ಮನೆಯ ಬಳಿ ಕೆಂಪು ಬಣ್ಣದ ‘ಸ್ಕೋಡಾ’ ಕಾರೊಂದು(ಟಿಎಸ್ 07-ಎಫ್.ಕ್ಯೂ. 3377) ವಾರಸುದಾರರಿಲ್ಲದೆ ನಿಂತಿರುವ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರಿಗೆ ಸುಳಿವು ನೀಡಿದ್ದಾರೆ. ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕಾರಿನ ಬಾಗಿಲಿಗೆ ‘ಲಾಕ್’ ಮಾಡದಿರುವುದು ಕಂಡು ಬಂದಿದ್ದು, ಕಾರಿನಲ್ಲಿ ಮೊಬೈಲ್ ಕೂಡ ಪತ್ತೆಯಾಗಿದೆ. ಈ ಮೊಬೈಲ್ ವಶಪಡಿಸಿಕೊಂಡ ಪೊಲೀಸರು ಅದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ತೆಲಂಗಾಣ ರಾಜ್ಯದ ಸರೂರ್ ನಗರದ ವಿಳಾಸ ತೋರಿಸಿದೆ.
ಈ ಸುಳಿವು ಪಡೆದ ಮಡಿಕೇರಿ ನಗರ ಪೊಲೀಸರು, ತೆಲಂಗಾಣದ ಸರೂರ್ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ, ಅದಾಗಲೇ ಕಾರು ಮಾಲಕ ವಿನಯ್ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿರುವುದು ಗೊತ್ತಾಗಿದೆ. ಸರೂರ್ ಪೊಲೀಸರು ವಿನಯ್ ಪೋಷಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಕಲೆಹಾಕಿ ಮಡಿಕೇರಿಗೆ ಧಾವಿಸಿದ್ದಾರೆ.
ಜಿಲ್ಲಾಧಿಕಾರಿಗಳ ಬಂಗಲೆಯ ಹಿಂಬದಿ ರಸ್ತೆಯ ಪಕ್ಕದಲ್ಲಿ ಕಾರು ಪತ್ತೆಯಾಗಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಮನೆಯೊಂದರ ಸಿಸಿ ಕ್ಯಾಮರಾವನ್ನು ತೆಲಂಗಾಣ ಪೊಲೀಸರು ಪರಿಶೀಲಿಸಿದ್ದು, ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಸಿಸಿ ಕ್ಯಾಮರಾ ಪರಿಶೀಲನೆಯಿಂದ ಇದುವರೆಗೆ ಯಾವುದೇ ಸುಳಿವು ದೊರಕಿಲ್ಲ ಎಂದು ತಿಳಿದು ಬಂದಿದ್ದು, ಕೊಡಗು ಜಿಲ್ಲಾ ಪೊಲೀಸರ ನೆರವು ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಮಡಿಕೇರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.







