ಹೆಜಮಾಡಿ ಟೋಲ್ ವಿರುದ್ಧ ಪ್ರತಿಭಟನೆ: ಸಚಿವೆ ಜಯಮಾಲಾ ಭೇಟಿ

ಪಡುಬಿದ್ರಿ, ಜ. 24: ಪಡುಬಿದ್ರಿಯಲ್ಲಿ 18 ದಿನಗಳಿಂದ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಗುರುವಾರ ಭೇಟಿ ನೀಡಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯು ವಿಫಲವಾದ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಪ್ರತಿಭಟನಾಕಾರರು ತೀರ್ಮಾನಿಸಿದ್ದರು. ಅದರಂತೆ ಗುರುವಾರದಿಂದ ಆರಂಭಿಸಿರುವ ಆಮರಣಾಂತ ಉಪವಾಸವನ್ನು ಈ ಕೂಡಲೇ ಹಿಂಪಡೆಯುವಂತೆ ಸಚಿವೆ ಜಯಮಾಲ ಮನವೊಲಿಸಿದರು. ಸಚಿವರ ಮನವಿಗೆ ಒಪ್ಪಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಮತ್ತಿತರರು ಗುರುವಾರದಿಂದ ಆರಂಭಿಸಲಾದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಸ್ಥಳೀಯರಿಗೆ ಟೋಲ್ ವಿನಾಯಿತಿ ಲಭಿಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸಿರುವುದಾಗಿಯೂ ಪಡುಬಿದ್ರಿ ನಾಗರಿಕ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯ ಒಂದೆಡೆ ಸ್ಥಳೀಯರಿಗೆ ವಿನಾಯಿತಿ ಹಾಗೂ ಮಗದೊಂದೆಡೆ ವಿನಾಯಿತಿಯನ್ನು ನೀಡದಿರುವುದು ಸರಿಯಲ್ಲ. ಸಾಸ್ತಾನದಂತೆಯೇ ಹೆಜಮಾಡಿ ಟೋಲ್‍ನಲ್ಲಿ ಪಡುಬಿದ್ರಿ ಜನತೆಗೂ ವಿನಾಯಿತಿಯನ್ನು ಒದಗಿಸಬೇಕು. ನವಯುಗ ನಿರ್ಮಾಣ ಕಂಪೆನಿ ಕಾಮಗಾರಿ ಪಡುಬಿದ್ರಿಯಲ್ಲಿ ತೀರಾ ಹಿಂದುಳಿದಿದ್ದು, ಟೋಲ್ ಅಧಿಕಾರಿಗಳು ಪಡುಬಿದ್ರಿ ಜನತೆಗೆ ವಿನಾಯಿತಿಯನ್ನು ನೀಡಲಿದ್ದೇವೆ ಎಂದಿದ್ದರೂ ಪ್ರತೀ ಬಾರಿಯೂ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಾಹನಗಳು ಟೋಲ್‍ಗೇಟ್ ದಾಟುವ ವೇಳೆ ವಿನಾಯಿತಿಯನ್ನು ನೀಡುತಿಲ್ಲ ಎಂದು ಪ್ರತಿಭಟನಕಾರರು ಸಚಿವೆ ಡಾ. ಜಯಮಾಲಾ ಅವರಿಗೆ ವಿವರಿಸಿದರು.
ಸಾಸ್ತಾನದ ನವಯುಗ ಟೋಲ್ ಪ್ಲಾಝಾದಲ್ಲೂ ಸ್ಥಳೀಯರಿಗೆ ಸುಂಕ ವಿನಾಯಿತಿ ಲಭಿಸುವಲ್ಲಿ ಸ್ವತಹಾ ತಾನೇ ಮಾತುಕತೆ ನಡೆಸಿ ಅಲ್ಲಿನ ಜನತೆಗೆನ್ಯಾಯ ಒದಗಿಸಿದ್ದೇನೆ. ಸ್ಥಳೀಯರ ನ್ಯಾಯಯುತ ಬೇಡಿಕೆಗಾಗಿ ಸರ್ಕಾರದ ಮಟ್ಟದಲ್ಲಿ ಸ್ಪಂದಿಸುವುದಾಗಿ ಹೇಳಿದ ಅವರು, ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಾಹನಗಳಿಗೂ ಸುಂಕ ವಿನಾಯಿತಿಗಾಗಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕೂಡಲೇ ತಮ್ಮ ಹೋರಾಟಕ್ಕೆ ಜಯ ಲಭಿಸುವಂತೆ ಪ್ರಾಮಾಣಿಕ ಪ್ರಯತ್ನನಡೆಸುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಗ್ರಾಮ ಪಂಚಾಯಿತಿ ಸದಸ್ಯ ಹಸನ್ ಬಾವ, ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು.







