ದೇವಸ್ಥಾನದಲ್ಲಿ ಜೀನ್ಸ್ ಪ್ಯಾಂಟ್ ಧರಿಸಬೇಡ: ಪತ್ರಕರ್ತೆಗೆ ಬಿಜೆಪಿ ನಾಯಕಿ ಮೌಸಮಿ ಚಟರ್ಜಿ ಸಲಹೆ
ಕೋಲ್ಕತಾ, ಜ.24: ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿರುವ ಹಿರಿಯ ನಟಿ ಮೌಸಮಿ ಚಟರ್ಜಿ ದೇವಸ್ಥಾನದಲ್ಲಿ ಜೀನ್ಸ್ ಪ್ಯಾಂಟ್ ಧರಿಸದಂತೆ ಪತ್ರಕರ್ತೆಯೊಬ್ಬರಿಗೆ ಸಲಹೆ ನೀಡಿರುವುದು ಈಗ ಚರ್ಚೆಗೆ ಗ್ರಾಸ ಒದಗಿಸಿದೆ.
‘ಆಧುನಿಕ ಬಟ್ಟೆಬರೆ ಧರಿಸಿ, ಆದರೆ ನಾವು ಇರುವ ಸ್ಥಳ ಯಾವುದು ಎಂಬುದನ್ನು ಮೊದಲು ಗಮನಿಸಬೇಕು. ದೇವಸ್ಥಾನದಲ್ಲಿ ಜೀನ್ಸ್ ಪ್ಯಾಂಟ್ ಧರಿಸಬಾರದು. ದೇವಸ್ಥಾನದಲ್ಲಿ ಸೀರೆ, ಸಲ್ವರ್ ಕಮೀಜ್ ಅಥವಾ ಘಾಗ್ರ ಚೋಲಿ ಧರಿಸಬೇಕು. ಇದು ಸೂಕ್ತವಾಗಿರುತ್ತದೆ. ಭಾರತೀಯರು ಸಂಪ್ರದಾಯ ಮತ್ತು ಸಂಸ್ಕೃತಿಯ ವಿಷಯದಲ್ಲಿ ವಿಶ್ವದಲ್ಲಿಯೇ ಮಾದರಿ ಎನಿಸಿಕೊಂಡಿದ್ದಾರೆ’ ಎಂದು ಮೌಸಮಿ ಚಟರ್ಜಿ ಪತ್ರಕರ್ತೆಗೆ ಸಲಹೆ ನೀಡಿದ್ದಾರೆ.
“ನಾನು ನಿನಗಿಂತ ತುಂಬಾ ಹಿರಿಯಳು. ನೀನು ಸಣ್ಣ ಹುಡುಗಿ. ನನ್ನ ಮಾತಿನಿಂದ ನಿನಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ತಾಯಿಯ ಸ್ಥಾನದಲ್ಲಿ ನಿಂತು ನಿನಗೆ ಹೇಳುತ್ತಿದ್ದೇನೆ. ಇನ್ನು ಮುಂದೆ ಹೀಗೆ ಮಾಡಬೇಡ” ಎಂದು ಚಟರ್ಜಿ ಹೇಳಿದ್ದಾರೆ.
ಹೀಗೆ ಸಲಹೆ ನೀಡಿರುವ ಬಗ್ಗೆ ವಿವಿಧೆಡೆಗಳಿಂದ ಬಂದಿರುವ ಟೀಕೆಗೆ ಸಮರ್ಥನೆ ನೀಡಿರುವ ಅವರು, ಭಾರತೀಯ ನಾರಿಯಾಗಿ , ದೇವಸ್ಥಾನದಲ್ಲಿ ತೊಡುವ ಬಟ್ಟೆಯ ಬಗ್ಗೆ ಆಕ್ಷೇಪ ಎತ್ತಿದ್ದೇನೆ. ದೇವಸ್ಥಾನದಲ್ಲಿ ಬಗ್ಗಿ ನಮಸ್ಕರಿಸುವಾಗ ಇಂತಹ ಬಟ್ಟೆಗಳು ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಇದು ನೈತಿಕ ಪೊಲೀಸ್‌ಗಿರಿಯಲ್ಲವೇ ಎಂಬ ಪ್ರಶ್ನೆಗೆ , ಓರ್ವ ತಾಯಿಯಾಗಿ ಅವರಿಗೆ ತಿಳಿಹೇಳುವ ಹಕ್ಕು ನನಗಿದೆ. ಅದನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಅವರಿಗೆ ಬಿಟ್ಟ ವಿಷಯ ಎಂದು 70ರ ಹರೆಯದ ಬಂಗಾಳಿ ನಟಿ ಹೇಳಿದ್ದಾರೆ.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಮೌಸಮಿ ಚಟರ್ಜಿ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.