ಕೊಲೆ ಸಂಚು ಆರೋಪ: ಬಜರಂಗದಳ ಮುಖಂಡ, ಬೆಳುವಾಯಿ ಪಂಚಾಯತ್ ಅಧ್ಯಕ್ಷ ಬಂಧನ

ಸೋಮನಾಥ ಕೋಟ್ಯಾನ್
ಮೂಡುಬಿದಿರೆ, ಜ. 24: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯಾ ಆರೋಪಿಗಳಲ್ಲೊಬ್ಬನಾದ ಗಂಟಲ್ ಕಟ್ಟೆಯ ಹೋಟೆಲ್ ವ್ಯಾಪಾರಿ ಇಮ್ತಿಯಾಝ್ (29) ಎಂಬಾತನ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಜರಂಗದಳ ಮುಖಂಡ, ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮನಾಥ ಕೋಟ್ಯಾನ್ ನನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಳಿಕ ಅವರನ್ನು ಮೂಡುಬಿದಿರೆ ಕೋರ್ಟ್ಗೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಇಮ್ತಿಯಾಝ್ ಬಂಧನಕ್ಕೊಳಗಾಗಿ ಹಲವು ದಿನಗಳ ಬಳಿಕ ಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದು, ನಂತರ ಗಂಟಲ್ ಕಟ್ಟೆಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದ. ಸೆ. 24ರಂದು ಕಾರಿನಲ್ಲಿ ಬಂದ ಆರೋಪಿಗಳು ಚಾ ಕುಡಿಯುವ ನೆಪದಲ್ಲಿ ಹೋಟೆಲ್ ಪ್ರವೇಶಿಸಿ ಇಮ್ತಿಯಾಝ್ ಗೆ ಮಾರಕಾಯುಧದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ಇಮ್ತಿಯಾಝ್ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಪ್ರಕರಣದ ಆರೋಪಿಗಳನ್ನು ಕೆಲವು ದಿನಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದರು. ಬಜರಂಗದಳ ಮುಖಂಡ ಬೆಳುವಾಯಿಯ ಸೋಮನಾಥ ಕೋಟ್ಯಾನ್ ಈ ಪ್ರಕರಣದ ಸಂಚು ರೂಪಿಸಿದ್ದನೆನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಮೂಡುಬಿದಿರೆ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.





